(ನ್ಯೂಸ್ ಕಡಬ) newskadaba.com, ಜೂ.22 ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ವಿವಾದವು ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ಬಿಜೆಪಿ ಹೈಡ್ರಾಮಾವೊಂದಕ್ಕೆ ವೇದಿಕೆ ಸಿದ್ಧಪಡಿಸಿದೆ.ಪಕ್ಷದ ಎಲ್ಲಾ 63 ಶಾಸಕರನ್ನು ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಕರೆದೊಯ್ದು, ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ “ನಾವು ಅಡ್ಡ ಮತದಾನ ಮಾಡಿಲ್ಲ” ಎಂದು ಆಣೆ-ಪ್ರಮಾಣ ಮಾಡಿಸಲು ಕಮಲ ಪಾಳಯ ನಿರ್ಧರಿಸಿದೆ.
ಇದೇ ಗುರುವಾರ ಅಥವಾ ಶುಕ್ರವಾರ ಧರ್ಮಸ್ಥಳದಲ್ಲೇ ಮಹತ್ವದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ. ಸಭೆಯ ಮುಕ್ತಾಯದ ಬಳಿಕ ಶಾಸಕರಿಂದ ಪ್ರಮಾಣ ಮಾಡಿಸುವ ಪ್ರಕ್ರಿಯೆ ನಡೆಯಲಿದೆ.ಸಭೆಗೆ ಯಾವುದೇ ಶಾಸಕರು ಗೈರಾಗದಂತೆ ತಡೆಯಲು ಎಲ್ಲ 63 ಶಾಸಕರಿಗೂ ಅಧಿಕೃತ ‘ವಿಪ್’ ಜಾರಿ ಮಾಡಲು ನಿರ್ಧರಿಸಲಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದು, ಶಾಸಕರೆಲ್ಲರೂ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲು ಕ್ರಮ ಕೈಗೊಂಡಿದ್ದಾರೆ.
ಅಡ್ಡ ಮತದಾನದ ಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿದವರನ್ನು ದೈವಿಕ ಸನ್ನಿಧಿಯಲ್ಲಿ ಪತ್ತೆಹಚ್ಚಲು ಹೊರಟಿರುವ ಬಿಜೆಪಿಯ ಈ ನಡೆ ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.









