(ನ್ಯೂಸ್ ಕಡಬ) newskadaba.com, ಜೂ.18 : ಭಾರತೀಯ ಶಾಸ್ತ್ರೀಯ ಕಲೆಯ ವೈಭವವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ನಿಟ್ಟಿನಲ್ಲಿ, ಕರ್ನಾಟಕ ಕಲಾಶ್ರೀ ಡಾ. ಸತ್ಯನಾರಾಯಣ ರಾಜು ಅವರ ‘ರಾಮಕಥೆ’ ಭರತನಾಟ್ಯ ನೃತ್ಯರೂಪಕ ಸ್ವಿಟ್ಜರ್ಲೆಂಡ್ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.ಮೇ ತಿಂಗಳಲ್ಲಿ ಸ್ವಿಟ್ಜರ್ಲೆಂಡ್ನ ಜಿನೀವಾ ಹಾಗೂ ಜ್ಯೂರಿಚ್ ನಗರಗಳಲ್ಲಿ ಈ ಅಪೂರ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಡಾ. ಉಷಾ ಆರ್.ಕೆ. ಅವರ ಪರಿಕಲ್ಪನೆಯ ಈ ರೂಪಕಕ್ಕೆ ಶ್ರೀರಾಮನ ಆದರ್ಶಗಳನ್ನು ನೃತ್ಯದ ಮೂಲಕ ಮನೋಜ್ಞವಾಗಿ ಕಟ್ಟಿಕೊಡಲಾಯಿತು. ಇದಕ್ಕೆ ಡಿ.ಎಸ್. ಶ್ರೀವತ್ಸ, ಎಸ್.ವಿ. ಬಾಲಕೃಷ್ಣ, ರಘುನಂದನ್ ರಾಮಕೃಷ್ಣ ಹಾಗೂ ಗೋಪಾಲ್ ಅವರ ಸಂಗೀತ ಸಂಯೋಜನೆ ಮೆರುಗು ನೀಡಿತ್ತು.
ಓಂಕಾರ ನೃತ್ಯ ಜಿನೀವಾ ಹಾಗೂ ಸ್ವಿಸ್ ಇಂಡಿಯನ್ ಫೈನ್ ಆರ್ಟ್ಸ್ ಅಸೋಸಿಯೇಷನ್ (SIFAA) ಸಹಯೋಗದಲ್ಲಿ, ಸುಜಾತಾ ವೆಂಕಟೇಶ್ ಮತ್ತು ವೆಂಕಟೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದೆ.ಭಾಷೆ-ಸಂಸ್ಕೃತಿಯ ಗಡಿಗಳನ್ನು ಮೀರಿ ಸ್ವಿಸ್ ಪ್ರೇಕ್ಷಕರ ಮನಗೆದ್ದ ಈ ಪ್ರದರ್ಶನ, ಭಾರತೀಯ ಕಲಾ ಪರಂಪರೆ ಹಾಗೂ ಕನ್ನಡಿಗರು ಹೆಮ್ಮೆಪಡುವಂತೆ ಮಾಡಿದೆ.









