(ನ್ಯೂಸ್ ಕಡಬ) newskadaba.com, ಜೂ.16 ನಗರದ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಕಸ ವಿಂಗಡಣೆ ಮಾಡುವಾಗ ಬರೋಬ್ಬರಿ 59 ತೋಟಾಗಳು ಪತ್ತೆಯಾಗಿದ್ದು, ಪೌರಕಾರ್ಮಿಕರು ಹಾಗೂ ಪೊಲೀಸರಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದರ ಹಿಂದಿರುವ ಅಸಲಿ ಸತ್ಯ ಬಯಲಾಗಿದೆ.
ಕಸದ ರಾಶಿಯಲ್ಲಿ ಏಕಕಾಲಕ್ಕೆ 59 ಗುಂಡುಗಳು ಸಿಕ್ಕಿದ್ದರಿಂದ ಗಾಬರಿಗೊಂಡ ಪೌರಕಾರ್ಮಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಉದ್ಯಮಭಾಗ ಪೊಲೀಸರು ಗುಂಡುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದರು.ವಿಜಯಪುರ ಮೂಲದ ಮಾಜಿ ಸೈನಿಕನೊಬ್ಬ ಸಂಬಂಧಿಕರ ಮಕ್ಕಳಿಗೆ ತೋರಿಸಲು ಈ ಗುಂಡುಗಳನ್ನು ಬೆಳಗಾವಿಯ ಮನೆಗೆ ತಂದಿದ್ದನು. ವಾಪಸ್ ಹೋಗುವಾಗ ಅವುಗಳನ್ನು ಅಲ್ಲೇ ಮರೆತು ಬಿಟ್ಟು ಹೋಗಿದ್ದನು.ಮನೆಯವರು ಸ್ವಚ್ಛತೆ ಮಾಡುವಾಗ ಅವುಗಳ ಮಹತ್ವ ತಿಳಿಯದೇ ಕಸದೊಂದಿಗೆ ಹೊರಗೆ ಎಸೆದಿದ್ದರು.
ಪತ್ತೆಯಾದ ಎಲ್ಲಾ 59 ಗುಂಡುಗಳೂ ಈಗಾಗಲೇ ಬಳಕೆಯಾದವುಗಳಾಗಿದ್ದು ,ಇವುಗಳಿಂದ ಯಾವುದೇ ಅಪಾಯವಿಲ್ಲ ಮತ್ತು ಇದರ ಹಿಂದೆ ಯಾವುದೇ ಅಪರಾಧ ಚಟುವಟಿಕೆ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಈ ಗುಂಡುಗಳ ಮೂಲದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.













