ಅಪಘಾತದ ಗಾಯಾಳು ಮುಸಲ್ಮಾನರನ್ನು ಆಸ್ಪತ್ರೆಗೆ ದಾಖಲಿಸಿದ ಹಿಂಜಾವೇ ಅಧ್ಯಕ್ಷ ► ಕರಾವಳಿಯ ಕೋಮು ಸಂಘರ್ಷದ ಮಧ್ಯೆಯೂ ಮಾನವೀಯತೆ ಜೀವಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.10. ಕರಾವಳಿಯು ಕಳೆದ ಒಂದು ತಿಂಗಳಿನಿಂದ ಕೋಮು ದಳ್ಳುರಿಯಿಂದ ಹೊತ್ತಿ ಉರಿಯುತ್ತಿದ್ದು, ಕೋಮು ಸಂಘರ್ಷಕ್ಕೆ ಎರಡು ಹೆಣಗಳು ಉರುಳಿವೆ. ಎರಡೂ ಧರ್ಮಗಳ ನಡುವೆ ಸರಿಪಡಿಸಲಾಗದಷ್ಟು ದೊಡ್ಡ ಕಂದಕ ನಿರ್ಮಾಣವಾಗಿದೆ. ದಿನಂಪ್ರತಿ ಕೋಮು ಪ್ರಚೋದಿತ ಹಿಂಸಾಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಬರುವ ವರದಿಗಳು ಜಿಲ್ಲೆಯ ಶಾಂತಿಪ್ರಿಯ ನಾಗರೀಕರನ್ನು ಆತಂಕಕ್ಕೀಡುಮಾಡಿದೆ. ಇವೆಲ್ಲದರ ಮಧ್ಯೆ 5 ದಿನಗಳ ಹಿಂದೆ ಪುತ್ತೂರಿನ ಅರಿಯಡ್ಕದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಗಾಯಾಳು ಯುವಕರನ್ನು ಹಿಂದೂ ಸಂಘಟನೆಯ ಪ್ರಮುಖರೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದು, ಕೋಮು ಸಂಘರ್ಷದ ಮಧ್ಯೆಯೂ ಮಾನವೀಯತೆಗೆ ಬೆಲೆ ಕೊಟ್ಟಿರುವಂತಹ ಘಟನೆಯೊಂದು ತಡವಾಗಿ ಗಮನ ಸೆಳೆಯುತ್ತಿದೆ.

ವಿದೇಶಕ್ಕೆ ಪ್ರಯಾಣಿಸಲು ಮಂಗಳೂರು ತೆರಳುತ್ತಿದ್ದ ಮಡಿಕೇರಿ ಮೂಲದ ಮುಸ್ಲಿಂ ಯುವಕರಿದ್ದ ಅಲ್ಟೊ ಕಾರು ಮತ್ತು ಲಾರಿಯೊಂದರ ನಡುವೆ ಕೌಡಿಚ್ಚಾರು ಬಳಿ ಜುಲೈ 5 ರಂದು ಅಪಘಾತವಾಗಿದ್ದು, ಕಾರಿನಲ್ಲಿದ್ದ ಅಶ್ಫಾಕ್(36), ಅರ್ಷದ್(27), ಖಾಸಿಂ(38), ಹ್ಯಾರಿಸ್ (28) ಗಂಭೀರ ಗಾಯಗೊಳ್ಳುತ್ತಾರೆ. ಆ ಕ್ಷಣದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಅದೇ ರಸ್ತೆಯಾಗಿ ಸಂಚರಿಸುತ್ತಿದ್ದ ಪುತ್ತೂರು ಹಿಂಜಾವೇ ಅಧ್ಯಕ್ಷ ಸಚಿನ್ ಪಾಪೆಜಾಲ್. ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಬಿಜೆಪಿ ಕಾರ್ಯಕರ್ತ ಸಂತೋಷ್ ಕುಟ್ಯಾಡಿ ಸಚಿನ್‍ರಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಾಥ್ ನೀಡಿದರು. ಕೋಮು ದಳ್ಳುರಿಯಿಂದ 144 ನಿಷೇಧಾಜ್ಞೆಯ ನಡುವೆಯೂ ಹೊತ್ತಿ ಉರಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವೀಯತೆಯು ಮರೆಮಾಚಿಲ್ಲ ಎನ್ನುವುದಕ್ಕೆ ಈ ಒಂದು ಘಟನೆಯು ಸಾಕ್ಷಿಯಾಗಿದೆ.

Also Read  ಗೂಡ್ಸ್ ವಾಹನ ಡಿಕ್ಕಿ- ರಸ್ತೆ ಬದಿ ನಿಂತಿದ್ದ ವ್ಯಕ್ತಿ ಮೃತ್ಯು..!

 

error: Content is protected !!
Scroll to Top