(ನ್ಯೂಸ್ ಕಡಬ) newskadaba.com ಮೇ. 09. ಫಲ್ಗುಣಿ ನದಿಗೆ (ಗುರುಪುರ ನದಿ) ಅಡ್ಡಲಾಗಿ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿಯನ್ನು ಸಂಪರ್ಕಿಸುವ ಅತ್ಯಾಧುನಿಕ ತಂತ್ರಜ್ಞಾನದ ಬೋ ಸ್ಟ್ರಿಂಗ್ ಸೇತುವೆಯ ಕಾಮಗಾರಿ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರದಂದು ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯು ವೇಗದ ಪ್ರಗತಿಯಲ್ಲಿದ್ದು, ಸ್ಥಳೀಯ ನಿವಾಸಿಗಳಿಗೆ ನಗರದ ಸಂಪರ್ಕವನ್ನು ಇದು ಸುಲಭಗೊಳಿಸಲಿದೆ ಎಂದರು.
“ಸ್ಮಾರ್ಟ್ ಸಿಟಿ ಯೋಜನೆಯಡಿ 64 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ. ಇದರಿಂದ ಬೆಂಗ್ರೆ ಪ್ರದೇಶದ ಸುಮಾರು 4,000 ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಪ್ರಸ್ತುತ ಬೆಂಗ್ರೆ ನಿವಾಸಿಗಳು ನಗರ ತಲುಪಲು ಫೆರ್ರಿ ಅವಲಂಬಿಸಿದ್ದಾರೆ ಅಥವಾ ಕೂಳೂರು ಮೂಲಕ ಸುಮಾರು 30-35 ನಿಮಿಷಗಳ ಕಾಲ ಪ್ರಯಾಣಿಸಬೇಕಿದೆ. ಸೇತುವೆ ಪೂರ್ಣಗೊಂಡರೆ ಈ ಪ್ರಯಾಣದ ಅವಧಿ ಕೇವಲ 8 ರಿಂದ 10 ನಿಮಿಷಕ್ಕೆ ಇಳಿಕೆಯಾಗಲಿದೆ ಎಂದರು.
ಜಿಲ್ಲೆಯಲ್ಲಿ ಮಳೆಗಾಲದ ಸಿದ್ಧತೆ ಮತ್ತು ಕುಡಿಯುವ ನೀರಿನ ಪೂರೈಕೆ ಕುರಿತು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರವಾಹ ಮತ್ತು ಭೂಕುಸಿತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ತಡೆಗೋಡೆ ನಿರ್ಮಾಣಕ್ಕೆ 80 ಕೋಟಿ ರೂ. ಅನುದಾನ ಲಭ್ಯವಿದ್ದು, ಕಾಮಗಾರಿ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಕಾರ್ಪೊರೇಟರ್ಗಳಾದ ವಿನಯರಾಜ್, ಅನಿಲ್ ಕುಮಾರ್, ಸಂತೋಷ್ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಸ್ಮಾರ್ಟ್ ಸಿಟಿ ಎಂಡಿ ಡಾ. ಸಂತೋಷ್ ಕುಮಾರ್ ಹಾಗೂ ಜಿ.ಎಂ ಅರುಣ್ ಪ್ರಭಾ ಉಪಸ್ಥಿತರಿದ್ದರು.









