(ನ್ಯೂಸ್ ಕಡಬ) newskadaba.com, ಮೇ.08 ಭಾರತೀಯ ರೈಲ್ವೇ ಕಳೆದ ಒಂದು ದಶಕದಲ್ಲಿ ಮಹತ್ತರ ಬದಲಾವಣೆ ಕಂಡಿದೆ. ಹೊಸ ರೈಲು, ವಿದ್ಯುತ್ತೀಕರಣ, ಮೂಲಭೂತ ಸೌಕರ್ಯ ಸೇರಿದಂತೆ ಹಲವು. ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ. ಇದೀಗ ಬರೋಬ್ಬರಿ 40 ವರ್ಷಗಳಿಂದ ಇರುವ ಹಳೇ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಸಂಪೂರ್ಣ ಬದಲಾವಣೆ ಮಾಡಲಾಗುತ್ತಿದೆ.
ಪ್ರಯಾಣಕರ ರಿಸರ್ವೇಶನ್ ಸಿಸ್ಟಮ್ ಬದಲು ಇದೀಗ ಹೊಸ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಹೆಚ್ಚಾಗಿದೆ. ಶೇಕಡಾ 80ರಷ್ಟು ಟಿಕೆಟ್ ಬುಕಿಂಗ್ ಆನ್‌ಲೈನ್ ಮೂಲಕವೇ ನಡೆಯುತ್ತಿದೆ.ಕೌಂಟರ್‌ಗೆ ಹೋಗಿ ಬುಕಿಂಗ್ ಮಾಡುವವರ ಸಂಖ್ಯೆ ವಿರಳವಾಗುತ್ತಿದೆ. ಇದರ ನಡುವೆ ರಿಸರ್ವೇಶನ್ ವ್ಯವಸ್ಥೆ ಬದಲಾಯಿಸಿ ಹೊಸ ಡಿಜಿಟಲ್ ವ್ಯವಸ್ಥೆ ತರಲು ಭಾರತೀಯ ರೈಲ್ವೇ ಸಚಿವಾಲಯ ಮುಂದಾಗಿದೆ.
. 40 ವರ್ಷಗಳಿಂದ ಚಾಲ್ತಿಯಲ್ಲಿರುವ ಹಳೇ ರಿಸರ್ವೇಶನ್ ಸಿಸ್ಟಮ್ ಬದಲು ಹೊಸ ಡಿಜಿಟಲ್ ವ್ಯವಸ್ಥೆ ಇದೇ ಆಗಸ್ಟ್ 1 ರಿಂದ ಜಾರಿಯಾಗುತ್ತಿದೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ 1986ರಲ್ಲಿ ಜಾರಿಗೆ ಬಂದಿದೆ. ಬಳಿಕ ಹಲವು ಸಣ್ಣ ಬದಲಾವಣೆಯೊಂದಿಗೆ ಇದುವರೆಗೂ ಚಾಲ್ತಿಯಲ್ಲಿದೆ.ಸದ್ಯ ಡಿಜಿಟಲ್ ಬೇಡಿಕೆಯಲ್ಲಿ ಹಳೇ ಮೀಸಲಾತಿ ವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚಿಸಲಾಗಿದೆ. ಇದರಿಂದ ಬುಕಿಂಗ್ ವೇಗವೂ ಹೆಚ್ಚಾಗಲಿದೆ.
ಹೊಸ ವ್ಯವಸ್ಥೆಯಲ್ಲಿ ಎಐ ಬಳಕೆ ಮಾಡಲಾಗುತ್ತಿದೆ. ಇದರಿಂದ ಟಿಕೆಟ್ ಕನ್‌ಫರ್ಮೇಶನ್, ಬುಕಿಂಗ್ ಬಗ್ಗೆ ನಿಖತರೆ ಸಿಗಲಿದೆ. ಹಳೇ ಪದ್ಧತಿಯಿಂದ ಹೊಸ ಡಿಜಿಟಲ್ ವ್ಯವಸ್ಥೆಗೆ ಬದಲಾಗುವ ವೇಳೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಸಚಿವ ಅಶ್ವಿನಿ ವೈಷ್ಣವ್ ಖಡಕ್ ಸೂಚನೆ ನೀಡಿದ್ದಾರೆ. ಟಿಕೆಟ್ ಬುಕಿಂಗ್ ಯಾವುದೇ ಕಾರಣಕ್ಕೆ ಸಮಸ್ಯೆಗೆ ಸಿಲುಕಬಾರದು ಎಂದಿದ್ದಾರೆ. ಇದರಂತೆ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ









