(ನ್ಯೂಸ್ ಕಡಬ) newskadaba.com, ಎ.25: ಕರ್ನಾಟಕ ಸರ್ಕಾರವು 56, 432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದು, ಸಾಮಾಜಿಕ ನ್ಯಾಯದ ತತ್ವದಡಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಘೋಷಿಸಿದೆ. ಸಚಿವ ಸಂಪುಟದ ಒಳ ಮೀಸಲಾತಿ ತೀರ್ಮಾನ ಘೋಷಣೆಯಾದ ಬೆನ್ನಲ್ಲೇ, ಸರ್ಕಾರಿ ಹುದ್ದೆಗಳನ್ನೂ ಭರ್ತಿ ಮಾಡುವ ಆದೇಶ ಹೊರಬಿದ್ದಿದೆ.
ಆದರೆ ಒಳ ಮೀಸಲಾತಿ ನಿರ್ಧಾರಗಳ ಅಡಿಯಲ್ಲಿ ಸರ್ಕಾರಿ ಹುದ್ದೆ ಭರ್ತಿಯಲ್ಲಿ ದಲಿತರಿಗೆ ಅನ್ಯಾಯವಾಗಲಿದೆ ಎಂದು ಪ್ರತಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎನ್. ಮಹೇಶ್, “ರಾಜ್ಯ ಸರ್ಕಾರ ತೆಗೆದುಕಜೊಂಡಿರುವ ಒಳ ಮೀಸಲಾತಿ ತೀರ್ಮಾನದಿಂದಾಗಿ, 56,432 ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ರಾಜ್ಯದ ದಲಿತ ಸಮುದಾಯಕ್ಕೆ 3,600 ಹುದ್ದೆಗಳ ನಷ್ಟವಾಗಲಿದೆ” ಎಂದು ಆರೋಪಿಸಿದರು.
“ರಾಜ್ಯ ಸರ್ಕಾರ 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಿರುವುದಾಗಿ ಹೇಳಿದೆ. ಇದನ್ನು ಸ್ವಾಗತಿಸುತ್ತೇವೆ. ಏಕೆಂದರೆ ಕಳೆದ 3-4
ವರ್ಷಗಳಿಂದ ಈ ಆದೇಶಕ್ಕಾಗಿ ನಿರುದ್ಯೋಗಿಗಳು ಕಾದು ಕುಳಿತಿದ್ದರು. ರಾಜ್ಯದ ಯುವಕರಿಗೆ ಉದ್ಯೋಗ ಸಿಗುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ರಾಜ್ಯ ಸರ್ಕಾರದ ಇಳ ಮೀಸಲಾತಿ ತೀರ್ಮಾನದಿಂದಾಗಿ ದಲಿತ ಸಮುದಾಯಕ್ಕೆ 3,600 ಹುದ್ದೆಗಳು ನಷ್ಟವಾಗಲಿವೆ” ಎಂದು ಎನ್. ಮಹೇಶ್ ತಿಳಿಸಿದರು.









