ಕಡಬ ಪೊಲೀಸ್ ಠಾಣೆಯಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣ ► ವಿವಿಧ ತಜ್ಞರಿಂದ ಸ್ಥಳ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಮೇ.17. ಇಲ್ಲಿನ ಪೊಲೀಸ್ ಠಾಣೆಯ ಹಳೆಯ ಕಟ್ಟಡದಲ್ಲಿ ಬುಧವಾರ ರಾತ್ರಿ ಭಾರೀ ಸದ್ದಿನೊಂದಿಗೆ ಭೀಕರ ಸ್ಫೋಟ ನಡೆದಿದ್ದು, ಘಟನಾ ಸ್ಥಳಕ್ಕೆ ಗುರುವಾರದಂದು ವಿವಿಧ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೀಕರ ಸ್ಫೋಟಕ್ಕೆ ಕಾರಣ ನಿಗೂಢವಾಗಿದ್ದ ಹಿನ್ನೆಲೆಯಲ್ಲಿ ಫೋರೆನ್ಸಿಕ್ ತಜ್ಞರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು, ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಫೋಟಕ್ಕೆ ಸಂಬಂಧಿಸಿದಂತೆ ವಿವಿಧ ಮಾದರಿಗಳನ್ನು ಸಂಗ್ರಹಿಸಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ಪ್ರಯೋಗಾಲಯದ ವರದಿಯನ್ನು ಆಧರಿಸಿ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.

ಘಟನೆಯ ಹಿನ್ನೆಲೆ: ಬುಧವಾರ ರಾತ್ರಿ ಭೀಕರ ಸ್ಫೋಟ ನಡೆದು ಕೂದಳೆಲೆಯ ಅಂತರದಲ್ಲಿ ಸಂಭಾವ್ಯ ಪ್ರಾಣಹಾನಿ ತಪ್ಪಿತ್ತು. ಪೊಲೀಸ್ ಠಾಣೆಗೆ ಹೊಂದಿಕೊಂಡಂತೆ ಇರುವ ಹಳೆಯ ಕಟ್ಟಡವನ್ನು ಗೃಹ ರಕ್ಷಕ ದಳದ ಕಛೇರಿಯನ್ನಾಗಿ ಬಳಸಲಾಗುತ್ತಿದ್ದು, ಬುಧವಾರ ರಾತ್ರಿ 7 ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಭೀಕರ ಸ್ಫೋಟವೊಂದು ನಡೆದಿತ್ತು. ಘಟನೆಗಿಂತ ಕೆಲವೇ ಕ್ಷಣಗಳ ಮುಂಚೆ ಸ್ಥಳದಲ್ಲಿದ್ದ ಇಬ್ಬರು ಸಿಬ್ಬಂದಿಗಳು ಹೊರಗಡೆ ಸಂಭಾವ್ಯ ಪ್ರಾಣಾಪಾಯ ತಪ್ಪಿತ್ತು. ಘಟನೆಯಿಂದಾಗಿ ಕಟ್ಟಡದ ಗೋಡೆಯು ಬಿರುಕು ಬಿಟ್ಟು ಮೇಲ್ಛಾವಣಿ ಹಾನಿಗೀಡಾಗಿದ್ದು, ಹಂಚುಗಳೆಲ್ಲ ಹೊರಹಾರಿ ಬಿದ್ದ ಕಾರಣ ಕಟ್ಟಡದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕೆಲವು ವಾಹನಗಳು ಜಖಂಗೊಂಡಿದ್ದವು. ಕಟ್ಟಡದ ಬಾಗಿಲುಗಳು ಛಿದ್ರಗೊಂಡು ಕೆಳಕ್ಕುರುಳಿ ಅಪಾರ ನಷ್ಟವುಂಟಾಗಿತ್ತು. ಅಲ್ಲದೆ ಸ್ಫೋಟದ ತೀವ್ರತೆಗೆ ಕಡಬ ಪರಿಸರದ ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದಿದ್ದವು.

ತಜ್ಞರ ಸ್ಥಳ ಪರಿಶೀಲನೆ ವೇಳೆ ಡಿವೈಎಸ್ಪಿ ಶ್ರೀನಿವಾಸ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್, ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group