(ನ್ಯೂಸ್ ಕಡಬ) newskadaba.com, ಎ.17: ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಪ್ರಮುಖ ಘಟ್ಟವಾದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಭಂಡಾರವು ಏಪ್ರಿಲ್ 16ರಂದು ರಾತ್ರಿ ಅತ್ಯಂತ ಸಡಗರ-ಸಂಭ್ರಮದಿಂದ ಕ್ಷೇತ್ರಕ್ಕೆ ಆಗಮಿಸಿತು.
ದೇವ-ದೈವಗಳ ಭೇಟಿ
ಬಲ್ನಾಡಿನಿಂದ ಹೊರಟ ದೈವಗಳ ಕಿರುವಾಳು ಭಂಡಾರವನ್ನು ಸಾವಿರಾರು ಭಕ್ತರು ಭಕ್ತಿಯ ಜಯಘೋಷಗಳೊಂದಿಗೆ ಬರಮಾಡಿಕೊಂಡರು. ದೇವಳದ ಹೊರಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರು ಮತ್ತು ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಗಳು ಮುಖಾಮುಖಿಯಾಗುವ ‘ದೇವ-ದೈವಗಳ ಭೇಟಿ’ಯ ದೃಶ್ಯ ಭಕ್ತರ ಕಣ್ಮನ ಸೆಳೆಯಿತು. ಸಾಂಪ್ರದಾಯಿಕ ನುಡಿಕಟ್ಟುಗಳ ನಂತರ, ದೈವಗಳ ಭಂಡಾರದೊಂದಿಗೆ ಶ್ರೀ ದೇವರ ಉತ್ಸವವು ಮುಂದುವರಿಯಿತು.
ಕೆರೆ ಉತ್ಸವ ಮತ್ತು ಸಣ್ಣ ರಥೋತ್ಸವ
ಭಂಡಾರ ಆಗಮನದ ಬಳಿಕ ದೇವಸ್ಥಾನದ ಆವರಣದಲ್ಲಿ ಸಣ್ಣ ರಥೋತ್ಸವ ಹಾಗೂ ಇತಿಹಾಸ ಪ್ರಸಿದ್ಧ ಕೆರೆ ಉತ್ಸವ (ತೆಪ್ಪೋತ್ಸವ) ಜರುಗಿತು. ಅಲಂಕೃತ ದೋಣಿಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಇರಿಸಿ ಕೆರೆಯಲ್ಲಿ ಸುತ್ತು ಬರಿಸುವ ವೈಭವವನ್ನು ವೀಕ್ಷಿಸಲು ಜಿಲ್ಲೆಯಾದ್ಯಂತ ಭಕ್ತ ಸಾಗರವೇ ಹರಿದುಬಂದಿತ್ತು. ಇದೇ ಸಂದರ್ಭದಲ್ಲಿ ನಡೆದ ಮನಮೋಹಕ ಸುಡುಮದ್ದು ಪ್ರದರ್ಶನ ಜಾತ್ರೆಯ ಮೆರುಗನ್ನು ಹೆಚ್ಚಿಸಿತು.
ಇಂದಿನ ವಿಶೇಷ: ಮಹಾ ಬ್ರಹ್ಮರಥೋತ್ಸವ
ಜಾತ್ರೆಯ ಮರುದಿನವಾದ ಇಂದು (ಏಪ್ರಿಲ್ 17) ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾ ಬ್ರಹ್ಮರಥೋತ್ಸವ ನೆರವೇರಲಿದೆ. ಪುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಯಾದ ಬೃಹತ್ ಸುಡುಮದ್ದು ಪ್ರದರ್ಶನ (ಪುತ್ತೂರು ಬೆಡಿ) ಇಂದು ರಾತ್ರಿ ನಡೆಯಲಿದ್ದು, ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ಪುತ್ತೂರು ನಗರವೇ ಸಜ್ಜಾಗಿದೆ.









