(ನ್ಯೂಸ್ ಕಡಬ) newskadaba.com,ಎ.11 : ಪರೀಕ್ಷಾ ಮೌಲ್ಯಮಾಪನ ಕೆಲಸಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಉಪನ್ಯಾಸಕರು ಹಾಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕಾರಿ, ನೌಕರರಿಗೆ ರಾಷ್ಟ್ರೀಯ ಜನಗಣತಿ-2027ರ ಕಾರ್ಯದಿಂದ ವಿನಾಯಿತಿ ನೀಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆದೇಶಿಸಿದೆ.
ಜನಗಣತಿ ಕಾರ್ಯಕ್ಕಾಗಿ ರಾಜ್ಯ ಸರಕಾರವು ಶಿಕ್ಷಣ ಇಲಾಖೆಯ ಗ್ರೂಪ್ ಬಿ ಮತ್ತು ಸಿ ವೃಂದದ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿದೆ. ಆದರೆ, ಶಿಕ್ಷಣ ಇಲಾಖೆಯ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಪರೀಕ್ಷಾ ಮರು ಮೌಲ್ಯಮಾಪನ ಕೆಲಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಉಪನ್ಯಾಸಕರು ಹಾಗೂ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕಾರಿ, ನೌಕರರಿಗೆ ವಿನಾಯಿತಿ ನೀಡುವಂತೆ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಜಿಬಿಎ ಮುಖ್ಯ ಆಯುಕ್ತರು ಅನುಮೋದನೆ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳುವಂತೆ ಉಪ ಆಯುಕ್ತರು(ಮಾಹಿತಿ ತಂತ್ರಜ್ಞಾನ) ಆದೇಶ ಹೊರಡಿಸಿದ್ದಾರೆ.
ಜನಗಣತಿ ಮಾಡದಿದ್ದರೆ 3 ವರ್ಷ ಜೈಲು ಶಿಕ್ಷೆ
ಜನಗಣತಿ ಕಾರ್ಯವನ್ನು ನಿರ್ವಹಿಸಲು ನಿರಾಕರಿಸುವ ಅಥವಾ ಮತ್ತೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಧಿಕಾರಿ, ಸಿಬ್ಬಂದಿಗೆ 1000 ರೂ. ದಂಡ ಹಾಗೂ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿಅವಕಾಶವಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ತಿಳಿಸಿದರು.
‘‘ಜನಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ನೌಕರರು ಏ.11 ರಿಂದ 13ರವರೆಗೆ ನಡೆಯುವ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು. ಅದೇ ರೀತಿ ಈಗಾಗಲೇ ನಡೆಸಿದ ತರಬೇತಿಗೆ ಗೈರಾದವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇವರು ಕೂಡ ಏ.11 ರಿಂದ 13ರವರೆಗೆ ನಡೆಯುವ ತರಬೇತಿಗೆ ಹಾಜರಾಗಬಹುದು. ಒಂದೊಮ್ಮೆ ಕರ್ತವ್ಯ ನಿರ್ವಹಿಸಲು ನಿರಾಕರಿಸಿದರೆ ಮತ್ತು ಮತ್ತೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕಾರಾಗೃಹ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಲ್ಲದೆ, ತರಬೇತಿಗೆ ಗೈರಾಗುವ ಅಧಿಕಾರಿಗಳು, ನೌಕರರ ವಿರುದ್ಧ ಮೊಕದ್ದಮೆ ಹೂಡಲಾಗುವುದು,’’ ಎಂದು ಎಚ್ಚರಿಕೆ ನೀಡಿದರು.









