(ನ್ಯೂಸ್ ಕಡಬ) newskadaba.com ಕಡಬ, ಮೇ.12. ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು-ಮಂಜೋಳಿಮಳೆ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ಇರುವುದರಿಂದ ಈ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಅಲ್ಲಿನ ಸುಮಾರು 140 ರಷ್ಟು ನಾಗರಿಕರು ಚುನಾವಣೆ ಬಹಿಷ್ಕರಿಸಿ ರಸ್ತೆಯನ್ನು ಶ್ರಮದಾನ ಮಾಡಿದ ಘಟನೆ ನಡೆದಿದೆ.
ಶ್ರಮದಾನದ ನೇತೃತ್ವ ವಹಿಸಿದ್ದ ಗ್ರಾ.ಪಂ.ಮಾಜಿ ಸದಸ್ಯ ಶ್ರೀಧರ ಕಂಪ ಹೇಳಿಕೆ ನೀಡಿ, ಬದಿಬಾಗಿಲು – ಮಂಜೋಳಿಮಳೆ ರಸ್ತೆಯಲ್ಲಿ ದಿನನಿತ್ಯ ನೂರಾರು ಜನ ಸಂಚರಿಸುತ್ತಿದ್ದು, ಈ ರಸ್ತೆಯ ದುರಸ್ಥಿಯ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದು ಈ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲಾಗಿ ಹಣ ಬಿಡುಗಡೆಯಾಗಿಲ್ಲ. ಈ ಹಿನ್ನಲೆಯಲ್ಲಿ ರಸ್ತೆ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದ್ದು, ಜನಪ್ರತಿನಿಧಿಗಳು ಈ ರಸ್ತೆಯನ್ನು ದುರಸ್ಥಿ ಮಾಡಿದ ಬಳಿಕವೇ ಮತದಾನ ಮಾಡುವುದೆಂದು ತೀರ್ಮಾನಿಸಲಾಗಿದೆ. ಅಲ್ಲಿಯ ತನಕ ಮತದಾನ ಮಾಡುವುದಿಲ್ಲ. ಇಂದಿನ ಚುನಾವಣೆಯಲ್ಲಿ ಸುಮಾರು 140 ಮಂದಿಯಷ್ಟು ಮತದಾನ ಮಾಡಲಿಲ್ಲ ಎಂದು ಶ್ರೀಧರ ಕಂಪ ಹೇಳಿದರು. ಶ್ರಮದಾನದಲ್ಲಿ ರಸ್ತೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಯೋಗಿಶ್ ಮಿತ್ತಂಡೆಲು, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಸಂತ ಪುಜಾರಿ ಬದಿಬಾಗಿಲು, ಸುಭಾಷ್, ಪುವಪ್ಪ ಗೌಡ, ಸುಧೀಶ್ ಮಂಜೋಳಿ, ವಿನೋದ, ಆನಂದ ಗೌಡ ಸೇರಿದಂತೆ ಹಲವಾರು ಮಂದಿ ರಸ್ತೆ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.