ಕಡಬ: ಅರಣ್ಯಾಧಿಕಾರಿ ಕಚೇರಿಗೆ ಕರೆಸಿ ಆರೋಪಿಗೆ ಹಲ್ಲೆ ಸಾರ್ವಜನಿಕರ ಆಕ್ರೋಶ



(ನ್ಯೂಸ್ ಕಡಬ) newskdaba.com ಕಡಬ, ಫೆ. 27. ಸುಬ್ರಹ್ಮಣ್ಯ ವಲಯ ಅರಣ್ಯದ ಐತ್ತೂರು ಎಂಬಲ್ಲಿ ನಡೆದ ಕಾಡುಕೋಣ ಬೇಟೆಗೆ ಸಂಬಂಧಿಸಿದಂತೆ ಜಾಮೀನಿನಲ್ಲಿದ್ದ ಆರೋಪಿಯ ಹೇಳಿಕೆ ಪಡೆಯಲೆಂದು ವಲಯ ಅರಣ್ಯಾಧಿಕಾರಿ ಕಛೇರಿಗೆ ಕರೆಸಿ ಅಮಾನುಷವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಯುವಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.





 

ಕಡಬ ತಾಲೂಕು ಐತ್ತೂರು ಗ್ರಾಮದ ಕೊಂಡೆ ಮನೆ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಜೀವನ್ (27) ಮತ್ತು 102 ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿ ನಿವಾಸಿ ಜೈನ್ ವರ್ಕಿ (50) ಎಂಬವರ ವಿರುದ್ಧ ಇತ್ತೀಚೆಗೆ ಐತ್ತೂರು ಅರಣ್ಯದಲ್ಲಿ ಕಾಡುಕೋಣ ಬೇಟೆಯಾಡಿದ ಪ್ರಕರಣ ದಾಖಲಾಗಿದ್ದು, ಇವರಿಬ್ಬರು ಬುಧವಾರದಂದು ಹೇಳಿಕೆ ನೀಡಲೆಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾಯವರ ಕಛೇರಿಗೆ ತೆರಳಿದ್ದರು ಎನ್ನಲಾಗಿದೆ. ಜೈನ್ ವರ್ಕಿಯವರನ್ನು ಹೊರಗಡೆ ಕಳುಹಿಸಿ ಜೀವನ್ ಮೇಲೆ ಅಮಾನುಷವಾಗಿ ಹಲ್ಲೆಗೈದಿದ್ದಲ್ಲದೆ, ವೈದ್ಯಕೀಯ ತಪಾಸಣೆಗೋಸ್ಕರ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಹಲ್ಲೆಯ ವಿಷಯ ತಿಳಿದ ಸಾರ್ವಜನಿಕರು ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಗೈದ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, ಸಿಬ್ಬಂದಿಗಳಾದ ಪ್ರಕಾಶ್ ಹಾಗೂ ಆದರ್ಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಗಂಭೀರ ಗಾಯಗೊಂಡಿರುವ ಯುವಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.






error: Content is protected !!
Scroll to Top