(ನ್ಯೂಸ್ ಕಡಬ) newskadaba.com,ಫೆ.23: ಉಡುಪಿ ನಗರದ ಜನನಿಬಿಡ ಪ್ರದೇಶವಾದ ಕಲ್ಸಂಕ ಸರ್ಕಲ್ನಲ್ಲಿ ಭಾನುವಾರ ಸಂಜೆ ಅಪರಿಚಿತ ವ್ಯಕ್ತಿಯೋರ್ವ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರು ಮತ್ತು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ಗದಗ ಮೂಲದ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಟಲಿ ಹಿಡಿದು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಕೂಗಾಡಿ ಆತಂಕ ಸೃಷ್ಟಿಸಿದ್ದನು.
ಪೊಲೀಸ್ ಕಾರ್ಯಾಚರಣೆ: ಒಮ್ಮೆ ಆತನಿಂದ ಪೆಟ್ರೋಲ್ ಕಸಿದುಕೊಂಡರೂ, ಮತ್ತೆ ಬಾಟಲಿ ಹಿಡಿದು ಬಂದಿದ್ದನು. ತಕ್ಷಣ ಕಾರ್ಯಪ್ರವೃತ್ತರಾದ ಎಸ್ಐ ನಾರಾಯಣ್ ಮತ್ತು ಗಂಗಪ್ಪ ಅವರು ಆತನನ್ನು ತಡೆದು ವಶಕ್ಕೆ ಪಡೆದರು.
ಮಾನವೀಯತೆ: ವ್ಯಕ್ತಿಯನ್ನು ವಿಚಾರಣೆ ನಡೆಸಿ, ಕೌನ್ಸೆಲಿಂಗ್ ಮಾಡಿದ ಪೊಲೀಸರು, ಬಳಿಕ ಆತನನ್ನು ಸ್ವಂತ ಊರಾದ ಗದಗಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿದ್ದಾರೆ.








