ಕಡಬ: ಸಮುದಾಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ, ಇಂಗು ಗುಂಡಿ ಬಳಕೆಗೆ ಚಾಲನೆ



(ನ್ಯೂಸ್ಕಡಬ) newskadaba.com,  ಫೆ.20  ಕಡಬ: ಆರೋಗ್ಯಪೂರ್ಣ ಮತ್ತು ಸ್ವಸ್ಥ ಸಮಾಜ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯ. ಸಮುದಾಯದ ಸಹಕಾರ ಇದ್ದಾಗ ಮಾತ್ರ ಯಾವುದೇ ಕೆಲಸ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಅವರು ಅಭಿಪ್ರಾಯಪಟ್ಟರು.





ಅವರು ಗುರುವಾರ ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಆರೋಗ್ಯ ತಪಾಸಣ ಶಿಬಿರವನ್ನು ಉದ್ಘಾಟಿಸಿ ಆಸ್ಪತ್ರೆಯ ದ್ರವತ್ಯಾಜ್ಯ ನಿರ್ವಹಣೆಗಾಗಿ ಪ್ರತಿಷ್ಠಾನದ ಆರ್ಥಿಕ ನೆರವಿನಿಂದ ನಿರ್ಮಿಸಲಾದ ಇಂಗುಗುಂಡಿಯ ಬಳಕೆಗೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ವಿಜಯ ಬ್ಯಾಂಕ್‌ನ ಮೂಲಕ ಆರಂಭಗೊಂಡ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇಂದು ಬ್ಯಾಂಕ್‌ ಆಫ್‌ ಬರೋಡದ ಅಧೀನದಲ್ಲಿ ಮುನ್ನಡೆಯುತ್ತಿದೆ. ಕೇವಲ ಆರ್ಥಿಕ ಲಾಭ ಮಾತ್ರ ಬ್ಯಾಂಕ್‌ನ ಉದ್ದೇಶವಾಗಿರಬಾರದು. ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ತನ್ನ ಲಾಭದ ಒಂದಂಶವನ್ನು ಮತ್ತೆ ಸಮಾಜಕ್ಕೆ ನೀಡಬೇಕೆನ್ನುವ ಉದ್ದೇಶದಿಂದ ಪ್ರತಿಷ್ಠಾನವು ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ನುಡಿದರು.






ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ|ದೀಪಕ್‌ ರೈ ಅವರು ಜನರ ಪ್ರೀತಿಗೆ ಪಾತ್ರವಾಗಿದ್ದ ವಿಜಯ ಬ್ಯಾಂಕ್‌ನ ಜನಪರ ಕಾಳಜಿಯ ವ್ಯವಸ್ಥೆಯನ್ನು ಬ್ಯಾಂಕ್‌ ಆಫ್‌ ಬರೋಡ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ.ನಮ್ಮ ಬೇಡಿಕೆಯಂತೆ ನಮ್ಮ ಆಸ್ಪತ್ರೆಯ ಅಗತ್ಯತೆಯನ್ನು ಮನಗಂಡು ನೆರವು ನೀಡಿದ ಪ್ರತಿಷ್ಠಾನದ ಪ್ರಮುಖರಿಗೆ ನಾವು ಆಭಾರಿಗಳಾಗಿದ್ದೇವೆ ಎಂದರು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್‌, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್. ಕೆ. ಹಾಗೂ ಬ್ಯಾಂಕ್‌ ಆಫ್‌ ಬರೋಡದ ಕೋಡಿಂಬಾಳ ಶಾಖಾ ಪ್ರಬಂಧಕ ರಾಮ್‌ಕುಮಾರ್‌ ಶುಭಹಾರೈಸಿದರು.ಆಸ್ಪತ್ರೆಯ ನಿವೃತ್ತ ಆಡಳಿತ ವೈದ್ಯಾಧಿಕಾರಿ ಡಾ|ತ್ರಿಮೂರ್ತಿ ಕೆ.ವಿ., ದಂತ ವೈದ್ಯೆ ಡಾ|ಪದ್ಮಶ್ರೀ, ಆಯುಷ್‌ ವೈದ್ಯೆ ಡಾ| ಅಶ್ವಧಿ, ಕಚೇರಿ ಅಧೀಕ್ಷಕ ಸುನಿಲ್‌, ಆಸ್ಪತ್ರೆಯ ಸಿಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಆರ್ಥಿಕ ನೆರವು ನೀಡಿದ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಹಾಗೂ ಜ್ಯೋತಿರಾಜ್‌ ಅವರನ್ನು ಗೌರವಿಸಲಾಯಿತು. ಆಸ್ಪತ್ರೆಗೆ ವಾಲ್‌ ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದ ದಯಾನಂದ ಗೌಡ ಆರಿಗ, ಕಾರ್ತಿಕ್‌ ಪಿಜಕಳ, ಇಂಗು ಗುಂಡಿಗೆ ಬಳಸಲು ದಪ್ಪ ಮರಳು ಉಚಿತವಾಗಿ ನೀಡಿದ ಸಿವಿಲ್‌ ಇಂಜಿನಿಯರ್‌ ನಾಗೇಶ್‌ ಕೋಡಿಂಬಾಳ ಅವರನ್ನು ಅಭಿನಂದಿಸಲಾಯಿತು.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ಮಂಜುನಾಥ ಸಿ. ಸ್ವಾಗತಿಸಿ, ಪ್ರಸ್ತಾವನೆಗೈದರು. ಸಿಬಂದಿ ಜಿನ್ಸಿ ಕೆ.ಟಿ. ನಿರೂಪಿಸಿ, ಜೆಸಿಂತ ವಂದಿಸಿದರು. ಬೆಳ್ಳಿಪ್ಪಾಡಿ ರಾಜೇಂದ್ರ ರೈ ಅವರು ಉದ್ಘಾಟಿಸಿದರು.

error: Content is protected !!
Scroll to Top