*ಕಡಬ: ಸೈಂಟ್ ಆನ್ಸ್ ಶಾಲೆಯಲ್ಲಿ ತರಬೇತಿ ಕಾರ್ಯಗಾರ* *ವ್ಯಕ್ತಿತ್ವದ ಪರಿಪೂರ್ಣತೆಗೆ ತರಬೇತಿಗಳು ಸಹಕಾರಿ: ವಂ. ಸುನಿಲ್ ಪ್ರವೀಣ್ ಪಿಂಟೋ*



(ನ್ಯೂಸ್ಕಡಬ) newskadaba.com,  ಫೆ.12 ಕಡಬ: ತರಬೇತಿಗಳು ಮನುಷ್ಯನ ವ್ಯಕ್ತಿತ್ವದಲ್ಲಿ ಪರಿಪೂರ್ಣತೆಯನ್ನು ಕಾಣಲು ಸಹಕಾರಿಯಾಗಿದೆ. ಆದುದರಿಂದ ವಿದ್ಯಾರ್ಥಿಗಳು ಈ ರೀತಿಯ ತರಬೇತಿಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ. ಸುನಿಲ್ ಪ್ರವೀಣ್ ಪಿಂಟೋ ಅವರು ಅಭಿಪ್ರಾಯ ಪಟ್ಟರು.





ಅವರು ಜೇಸಿಐ ಕಡಬ ಕದಂಬ ಹಾಗೂ ಜೇಸಿಐ  ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೈಂಟ್ ಜೋಕಿಂ ಚರ್ಚ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ವ್ಯಕ್ತಿ ತನ್ನ ಗುರಿಯನ್ನು ತಲುಪಲು ಸಮರ್ಥವಾದ ಗುರುವನ್ನು ಹೊಂದಿರಬೇಕು. ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯುವ ಜನರು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಗುರು ಹಿರಿಯರು ತೋರಿಸುವ ಮಾರ್ಗದಲ್ಲಿ ಮುನ್ನಡೆದು ಜೀವನದಲ್ಲಿ ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಅವರು ಸಲಹೆ ನೀಡಿದರು.






ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಬೇತಿಯನ್ನು ನಡೆಸಿಕೊಟ್ಟ ಜೇಸಿ ವಲಯ ತರಬೇತುದಾರ ಸುಹಾಸ್ ಮರಿಕೆ ಅವರು ಮಾತನಾಡಿ ಜೀವನವನ್ನು ಸಮರ್ಥವಾಗಿ ಎದುರಿಸಲು ಆತ್ಮವಿಶ್ವಾಸ ಅತಿ ಮುಖ್ಯ. ನಮಗೆ ಆತ್ಮವಿಶ್ವಾಸ ಮೂಡಬೇಕಾದರೆ ನಮ್ಮಲ್ಲಿನ ಜ್ಞಾನ ವೃದ್ಧಿಯಾಗಬೇಕು. ಕಲಿಕೆಯಿಂದ ನಮ್ಮ ಜ್ಞಾನ ವೃದ್ಧಿಯಾಗಲು ಸಾಧ್ಯ. ಆದುದರಿಂದ ಕಲಿಕೆಯ ಬಗ್ಗೆ ಶ್ರದ್ಧೆ ಮತ್ತು ಪರಿಶ್ರಮ ಇದ್ದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದರು.  ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ಜೆಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್. ಕೆ., ಘಟಕದ ನಿಕಟಪೂರ್ವ ಅಧ್ಯಕ್ಷೆ ವಿಶ್ರುತ ರಾಜೇಶ್, ಪದಾಧಿಕಾರಿ ನವ್ಯ ಕೃಷ್ಣ, ಯುವ ಜೇಸಿ  ಅಧ್ಯಕ್ಷೆ ಶಾಲಿನಿ ಪಿಂಟೋ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಜೇಸಿ ಘಟಕದ ಅಧ್ಯಕ್ಷ ಜೇಮ್ಸ್ ಕೃಷಲ್ ಡಿ ಸೋಜಾ ಅವರು ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಂದಿಸಿದರು.

error: Content is protected !!
Scroll to Top