(ನ್ಯೂಸ್ ಕಡಬ) newskadaba.com, ಫೆ.12 ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ಬುಧವಾರ ಮಧ್ಯಾಹ್ನ ಒಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೆಂಟ್ರಿಂಗ್ ಕೆಲಸಕ್ಕೆ ಬಳಸುವ ಕಬ್ಬಿಣದ ಪೈಪ್‌ಗಳು ಹಾಗೂ ಇತರ ಸಾಮಗ್ರಿಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಕನರಾಜೆ ಎಂಬಲ್ಲಿ ರಸ್ತೆಯು ಅಂಕುಡೊಂಕಾಗಿದ್ದು, ಪಿಕಪ್ ವಾಹನವು ಮೇಲ್ಭಾಗದ ರಸ್ತೆಯಲ್ಲಿ ಸಾಗುತ್ತಿತ್ತು. ಈ ವೇಳೆ ಹಠಾತ್ತನೆ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯ ಬದಿಯಿಂದ ಉರುಳಿ, ನೇರವಾಗಿ ಕೆಳಭಾಗದಲ್ಲಿದ್ದ ರಸ್ತೆಗೆ ಅಪ್ಪಳಿಸಿದೆ. ವಾಹನವು ಸಂಪೂರ್ಣವಾಗಿ ಪಲ್ಟಿಯಾಗಿದ್ದು, ಅದರಲ್ಲಿದ್ದ ಸೆಂಟ್ರಿಂಗ್ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ವಾಹನದಲ್ಲಿದ್ದ ಅಳಕ್ಕೆ ನಿವಾಸಿಯಾದ ಹರಿಶ್ಚಂದ್ರ ಎಂಬವರ ಪುತ್ರ ಹೇಮಚಂದ್ರ (32 ವರ್ಷ). ಅಪಘಾತದ ತೀವ್ರತೆಗೆ ವಾಹನ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಇವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಉಮ್ಮರಬ್ಬ (51 ವರ್ಷ) ಎಂಬವರು ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ








