(ನ್ಯೂಸ್ ಕಡಬ)com,ಡಿ.26: ನೈಜೀರಿಯಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಭಾರೀ ಬಾಂಬ್ ದಾಳಿ ನಡೆಸಿದೆ. ಕ್ರೈಸ್ತರ ಮೇಲಿನ ಹಿಂಸಾಚಾರಕ್ಕೆ ಪ್ರತೀಕಾರವಾಗಿ ಈ ಏರ್‌ಸ್ಟ್ರೈಕ್ ನಡೆಸಲಾಗಿದೆ ಎಂದು ಅಮೆರಿಕ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರೂಥ್ ಸೋಶಿಯಲ್’ ಜಾಲತಾಣದ ಮೂಲಕ ಈ ದಾಳಿಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. “ಇಂದು ರಾತ್ರಿ ನನ್ನ ನಿರ್ದೇಶನದ ಮೇರೆಗೆ ವಾಯುವ್ಯ ನೈಜೀರಿಯಾದಲ್ಲಿ ಐಸಿಸ್ ಭಯೋತ್ಪಾದಕರ ವಿರುದ್ಧ ಅಮೆರಿಕ ಪ್ರಬಲ ಮತ್ತು ಮಾರಕ ದಾಳಿಯನ್ನು ಆರಂಭಿಸಿದೆ,” ಎಂದು ಟ್ರಂಪ್ ತಿಳಿಸಿದ್ದಾರೆ.
ಐಸಿಸ್ ಉಗ್ರರು ಮುಗ್ಧ ಕ್ರೈಸ್ತರನ್ನು ಹಲವು ವರ್ಷಗಳಿಂದ ಕ್ರೂರವಾಗಿ ಹತ್ಯೆ ಮಾಡುತ್ತಿದ್ದು, ಇಂತಹ ಹಿಂಸಾಚಾರ ಶತಮಾನಗಳಲ್ಲಿ ಕಾಣದ ಮಟ್ಟದಲ್ಲಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. “ಕ್ರೈಸ್ತರ ಹತ್ಯೆಯನ್ನು ನಿಲ್ಲಿಸದಿದ್ದರೆ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ನಾನು ಈ ಹಿಂದೆ ಎಚ್ಚರಿಕೆ ನೀಡಿದ್ದೆ. ಇಂದು ಬಾಂಬ್ ದಾಳಿ ಮೂಲಕ ಆ ಎಚ್ಚರಿಕೆಯ ಅರ್ಥವನ್ನು ತೋರಿಸಿದ್ದೇವೆ,” ಎಂದು ಅವರು ಹೇಳಿದ್ದಾರೆ.













