(ನ್ಯೂಸ್ ಕಡಬ) newskadaba.com, ನ.28: ಬೆಂಗಳೂರು: ಬೀದಿ ನಾಯಿಗಳ ಹಾವಳಿ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಎಚ್ಚೆತ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೀದಿ ನಾಯಿಗಳ ಮಾಹಿತಿಗಳನ್ನು ಸಂಗ್ರಹಿಸಲು ಐದೂ ನಗರ ಪಾಲಿಕೆಗಳು ವಿವಿಧ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಮಾತನಾಡಿ, ರಾಜ್ಯ ಸರ್ಕಾರಿ ಕಚೇರಿ ಆವರಣದಲ್ಲಿರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿರುವ ಐದು ಪಾಲಿಕೆಗಳು ಸರ್ಕಾರಿ ಕಚೇರಿಯ ಆವರಣದಲ್ಲಿ ವಾಸಿಸುವ ಬೀದಿ ನಾಯಿಗಳ ಬಗ್ಗೆ ವಿವರಗಳನ್ನು ನೀಡುವಂತೆ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿವೆ. ಇಲಾಖೆ ಮತ್ತು ಸಂಸ್ಥೆಗಳಿಂದ ಮಾಹಿತಿ ಬಂದ ನಂತರ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಎಂಟು ವಾರಗಳೊಳಗೆ ಕೈಗೊಂಡ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸಲು ಸುಪ್ರೀಂ ಕೋರ್ಟ್ ಎಲ್ಲಾ ನಗರ ಪಾಲಿಕೆಗಳಿಗೆ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಗರ ಪಾಲಿಕೆಗಳು ಬೀದಿ ನಾಯಿಗಳ ಬಗ್ಗೆ ಮಾಹಿತಿ ಪಡೆಯಲು ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ.












