(ನ್ಯೂಸ್ ಕಡಬ) newskadaba.com, ನ.22: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ಗೇಮ್ ಚೇಂಜರ್ಸ್ ತಂಡದ ಆರೋಪಗಳಿಗೆ ಎದುರಾಳಿ ಬಣವನ್ನು ಮುನ್ನಡೆಸುತ್ತಿರುವ ಮಾಜಿ ಕ್ರಿಕೆಟಿಗ, ಹಿರಿಯ ಆಡಳಿತಾಧಿಕಾರಿ ಬ್ರಿಜೇಶ್ ಪಟೇಲ್ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಜೇಶ್ ತಮ್ಮ ತಂಡದಿಂದ ಸ್ಪರ್ಧೆ ಮಾಡುತ್ತಿರುವವರನ್ನು ಪರಿಚಯಿಸಿದ್ದಲ್ಲದೇ, ಎದುರಾಳಿ ಬಣ ಎತ್ತಿರುವ ಪ್ರಶ್ನೆಗಳಿಗೂ ಉತ್ತರಿಸಿದರು. ಕೆಲ ದಿನಗಳ ಹಿಂದೆ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಅವರು, ಬ್ರಿಜೇಶ್ ಪಟೇಲ್ ಹಿಂದಿನ ಆಸನದಲ್ಲಿ ಕೂತು ಸವಾರಿ ಮಾಡುತ್ತಿದ್ದಾರೆ. ಅವರ ನಿರ್ದೇಶನದಂತೆಯೇ ರಾಜ್ಯ ಕ್ರಿಕೆಟ್‌ನಲ್ಲಿ ಎಲ್ಲವೂ ನಡೆಯುತ್ತಿದೆ. ರಾಜ್ಯದಲ್ಲಿ ಕ್ರಿಕೆಟ್ ವಾತಾವರಣವೇ ಹಾಳಾಗಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಬ್ರಿಜೇಶ್, ರಾಜ್ಯದಲ್ಲಿ ಕ್ರಿಕೆಟ್ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನಾನು ಹೇಳುವ ಅವಶ್ಯಕತೆ ಇಲ್ಲ. ನಮ್ಮ ತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲುತ್ತಿರುವ ಪ್ರಶಸ್ತಿಗಳು, ಅಂತಾರಾಷ್ಟ್ರೀಯ, ಐಪಿಎಲ್‌ನಲ್ಲಿ ನಮ್ಮ ಆಟಗಾರರ ಪ್ರದರ್ಶನಗಳೇ ಎದುರಾಳಿಗಳ ಪ್ರಶ್ನೆಗೆ ಉತ್ತರ ನೀಡುತ್ತವೆ. ಇನ್ನು, ನಾನು ನನ್ನ ಜೊತೆಗಿರುವ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದೇನೆ. ಅದರಲ್ಲಿ ಯಾವ ತಪ್ಪೂ ಇಲ್ಲ. ನಾನು ಮಾಡುತ್ತಿರುವುದು ತಪ್ಪು ಎನ್ನುವುದಾದರೆ, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಮಾಡುತ್ತಿರುವುದೂ ತಪ್ಪು ತಾನೆ ಎಂದಿದ್ದಾರೆ.
ಈಗ ಚುನಾವಣೆಗೆ ಸ್ಪರ್ಧಿಸುತ್ತಿರುವವರು ಆಡಳಿತಾಧಿಕಾರಿಗಳಾಗಿ ಸಾಕಷ್ಟು ಅನುಭವ ಹಿಂದಿದ್ದಾರೆ. ಅವರಿಗೆ ಅಧಿಕಾರ ಸಿಕ್ಕರೆ ರಾಜ್ಯ ಕ್ರಿಕೆಟ್ ಸುರಕ್ಷಿತ ಕೈಗಳಿಗೆ ಸೇರಲಿದೆ. ಎದುರಾಳಿ ತಂಡ ಹೇಳುವ ಹಾಗೆ ಉತ್ತಮ ಕ್ರಿಕೆಟರ್‌ಗಳು ಉತ್ತಮ ಆಡಳಿತಾಧಿಕಾರಿಗಳಾಗಬಲ್ಲರು ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದು ಬ್ರಿಜೇಶ್ ಹೇಳಿದರು.














