(ನ್ಯೂಸ್ ಕಡಬ) newskadaba.com, ಅ.29 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ರೋಡ್ ರೇಜ್ ಪ್ರಕರಣಗಳು (Bengaluru Road Rage) ಹೆಚ್ಚಾಗುತ್ತಿವೆ. ಈ ನಡುವೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ರೋಡ್ ರೇಜ್ ಪ್ರಕರಣದಲ್ಲಿ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕಾರಿನ ಮಿರರ್‌ಗೆ ಬೈಕ್ ಟಚ್ ಆಗಿದ್ದಕ್ಕೆ ಕೋಪಗೊಂಡ ದಂಪತಿ, ಬೆನ್ನಟ್ಟಿ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿದ್ದರಿಂದ ದರ್ಶನ್ ಎಂಬ ಯುವಕ ಮೃತಪಟ್ಟಿದ್ದಾನೆ. ವರುಣ್ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದಾನೆ.
ಅ. 27ರ ರಾತ್ರಿ ಶ್ರೀರಾಮ ಲೇಔಟ್‌ನಲ್ಲಿ ಘಟನೆ ನಡೆದಿದೆ. ದರ್ಶನ್ ಮತ್ತು ವರುಣ್ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರಿನ ಮಿರರ್‌ಗೆ ಟಚ್ ಆಗಿದೆ. ಈ ವೇಳೆ ಮಿರರ್ ಒಡೆದಿದ್ದು, ಕಾರಿನಲ್ಲಿದ್ದ ಮನೋಜ್ ಕುಮಾರ್ ಮತ್ತು ಆರತಿ ಶರ್ಮ ದಂಪತಿ ಕೋಪಗೊಂಡು, ಸುಮಾರು ಎರಡು ಕಿಲೋಮೀಟರ್‌ನಷ್ಟು ಹಿಂಬಾಲಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗುರುಳಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ದರ್ಶನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಾಥಮಿಕವಾಗಿ ಅಪಘಾತ ಎಂದು ಜೆಪಿ ನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು.












