(ನ್ಯೂಸ್ ಕಡಬ) newskadaba.com, ಅ.20 ಉತ್ತರಪ್ರದೇಶ: ದೀಪಾವಳಿ ಹಬ್ಬದ ನಿಮಿತ್ತ ಭರ್ಜರಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಸಮಯದಲ್ಲಿ ಎರಡು ಗಿನ್ನೆಸ್ ದಾಖಲೆ ನಿರ್ಮಾಣಗೊಂಡಿವೆ. ಅಯೋಧ್ಯೆಯ 56 ಘಾಟ್ಗಳ ಸಾಲುಗಳುದ್ದಕ್ಕೂ ಅತಿಹೆಚ್ಚು ದೀಪಗಳನ್ನು ಹಚ್ಚಿದ್ದು, ಅತಿ ಹೆಚ್ಚು ಜನರು ಒಟ್ಟಿಗೆ ದೀಪಾರತಿ ಮಾಡಿದ್ದು, ಈ ಎರಡು ವಿಶ್ವ ದಾಖಲೆಗಳು ನಿರ್ಮಾಣವಾಗಿವೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನಿಂದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದಾಖಲೆ ನಿರ್ಮಾಣಗೊಂಡದ್ದಕ್ಕೆ ಪ್ರಮಾಣಪತ್ರ ನೀಡಲಾಗಿದೆ.
ಈ ದೀಪೋತ್ಸವವನ್ನು ರಾಮನ 14 ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ವಾಪಸಾದ ಸಂದರ್ಭದಲ್ಲಿ ನಡೆದಿದ್ದ ದೀಪ ಹಬ್ಬದ ಸ್ಮರಣಾರ್ಥವಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿ ಅಯೋಧ್ಯೆಯ ಘಾಟ್ಗಳಾದ್ಯಂತ 26,17,215 ದೀಪಗಳನ್ನು ಹಚ್ಚಲಾಯಿತು.ಹಲವಾರು ವಿಶ್ವವಿದ್ಯಾಲಯಗಳು, ಕಾಲೇಜುಗಳಿಂದ ಸಾವಿರಾರು ಸಂಖ್ಯೆಯ ಸ್ವಯಂಸೇವಕರು ಬಂದು ದೀಪಾರತಿಯಲ್ಲಿ ಭಾಗವಹಿಸಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರು ದೀಪಕ್ಕೆ ಎಣ್ಣೆ ಮತ್ತು ಬತ್ತಿಯನ್ನು ಹಾಕಿ ಘಾಟ್ಗಳ ಉದ್ದಕ್ಕೂ ವಿಶೇಷ ಮಾದರಿಯಲ್ಲಿ ಇಟ್ಟಿದ್ದಾರೆ..
ಉತ್ತರಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅಯೋಧ್ಯೆಯ ದೀಪಾರತಿ ಉತ್ಸವವನ್ನು ಟೀಕಿಸಿ ಬಿಜೆಪಿಯ ದಾಳಿಗೆ ಹೊಸ ಅಸ್ತ್ರ ಕೊಟ್ಟಿದ್ದಾರೆ. ಸಮಾಜವಾದಿ ಪಕ್ಷಕ್ಕೆ ರಾಮಮಂದಿರ ಆಂದೋಲನ ಹತ್ತಿಕ್ಕುವ ಮತ್ತು ಹಿಂದೂ ವಿರೋಧಿ ಭಾವನೆಯನ್ನು ಪ್ರಚಾರಪಡಿಸುವ ಪರಂಪರೆಯೇ ಇದೆ ಎಂದು ಬಿಜೆಪಿ ಲೇವಡಿ ಮಾಡಿದೆ ಎಂದು ಹೇಳಲಾಗಿದೆ.












