(ನ್ಯೂಸ್ ಕಡಬ) newskadaba.com, ಅ.20 ಬೆಂಗಳೂರು : ದೀಪಾವಳಿ ಹಿನ್ನೆಲೆಯಲ್ಲಿ ರವಿವಾರ ನಗರದ ಕೆ.ಆರ್.ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಜನ ಭರ್ಜರಿ ಹಬ್ಬದ ಖರೀದಿ ಮಾಡಿದ್ದಾರೆ. ಒಂದೇ ದಿನದ ಅಂತರದಲ್ಲಿ ಹೂವುಗಳ ದರ ದುಪ್ಪಟ್ಟಾಗಿ ಗ್ರಾಹಕರಿಗೆ ಬಿಸಿ ತಟ್ಟಿತು.
ಭಾನುವಾರದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೆ ನಗರದ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಗಾಂಧಿ ಬಝಾರ್, ಹೆಬ್ಬಾಳ, ರಾಜಾಜಿನಗರ, ಮಲ್ಲೇಶ್ವರ, ಜಯನಗರ, ಯಶವಂತಪುರ ಸೇರಿ ಎಲ್ಲ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಇದರ ಜೊತೆಗೆ ಫುಟ್ಪಾತ್, ಬೀದಿಗಳಲ್ಲಿ ಹಳ್ಳಿಗರು ವ್ಯಾಪಾರ ಮಾಡಿದರು.
ಶನಿವಾರ ಮಲ್ಲಿಗೆ ₹600- ₹800 ಇದ್ದುದು ಭಾನುವಾರ ₹1000 ದಾಟಿತ್ತು. ಗುಲಾಬಿ ₹100- ₹200 ರಿಂದ ₹400 ಆಗಿದ್ದರೆ ಚೆಂಡು ಹೂವು ₹50- ₹100 ರಿಂದ 40ದರ ಏರಿತ್ತು. ಇನ್ನು ಕನಕಾಂಬರ ದರವೂ ₹1000- ₹1200 ದುಪ್ಪಟ್ಟಾಗಿ ₹2000 ಮೀರಿತ್ತು. ತಾವರೆ ₹50ಗೆ ಒಂದರಂತೆ ಮಾರಾಟವಾದರೆ ಸೇವಂತಿಗೆ ಬೆಲೆಯೂ ಏರಿಕೆಯಾಗಿತ್ತು. ಇನ್ನು ಸೇಬು ₹ 250, ಕಿತ್ತಳೆ ₹ 250, ಪಪ್ಪಾಯ ಕೇಜಿಗೆ ₹ 50, ದಾಳಿಗೆ ₹ 200, ಮೂಸಂಬಿ ₹ 180 ಬೆಲೆಯಿತ್ತು.












