(ನ್ಯೂಸ್ ಕಡಬ) newskadaba.com, ಅ.17 ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಸಾಕಷ್ಟು ಟೀಕೆ, ವಿರೋಧಗಳು ವ್ಯಕ್ತವಾಗುತ್ತಿದ್ದರೂ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾತ್ರ ಯಾವುದಕ್ಕೂ ಜಗ್ಗದೆ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಇತ್ತೀಚೆಗೆ ದರ ಏರಿಕೆ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ಕೆಲವು ಸ್ಪಷ್ಟೀಕರಣಗಳನ್ನು ಕೋರಿ ಬಿಎಂಆರ್ಸಿಎಲ್’ಗೆ ಪತ್ರವನ್ನೂ ಬರೆದಿದ್ದರು.ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಅವರು, ಫೆಬ್ರವರಿಯಲ್ಲಿ ಜಾರಿಗೆ ತರಲಾದ ಹೆಚ್ಚಳವು ಶಾಸನಬದ್ಧ ದರ ನಿಗದಿ ಸಮಿತಿಯ (ಎಫ್ಎಫ್ಸಿ) ಶಿಫಾರಸುಗಳನ್ನು ಆಧರಿಸಿದೆ ಎಂದು ಹೇಳಿದ್ದಾರೆ.
FFC ವರದಿಯಲ್ಲಿ ಉಲ್ಲೇಖಿಸಲಾದ ಶೇ.105.15 ದರ ಏರಿಕೆ ಎಂಬುದು ನಿಜವಾದ ದರ ಹೆಚ್ಚಳವನ್ನು ಸೂಚಿಸುವುದಿಲ್ಲ. ಬದಲಿಗೆ, ಇದು 2017 ರಿಂದ ಕಾರ್ಯಾಚರಣಾ ವೆಚ್ಚದಲ್ಲಿನ ಒಟ್ಟು ಬದಲಾವಣೆಗಳನ್ನು ಟ್ರ್ಯಾಕ್ ಮಾಡುವ ಸಂಯೋಜಿತ ವೆಚ್ಚ ಸೂಚ್ಯಂಕದ ಚಲನೆಯನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಬಡ್ಡಿ, ಸವಕಳಿ, ಸಿಬ್ಬಂದಿ ಮತ್ತು ಇಂಧನ ವೆಚ್ಚಗಳನ್ನು ಹೊರತುಪಡಿಸಲಾಗಿದೆ ಶುಲ್ಕೇತರ ಆದಾಯ ಮೂಲಗಳು ಸೀಮಿತವಾಗಿರುವುದರಿಂದ ಆರ್ಥಿಕ ಸುಸ್ಥಿರತೆ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆವರ್ತಕ ಹೊಂದಾಣಿಕೆಗಳು ಅಗತ್ಯವೆಂದೂ ಇದೇ ವೇಳೆ ತಿಳಿಸಿದ್ದಾರೆ.












