(ನ್ಯೂಸ್ ಕಡಬ) newskadaba.com ಪಂಜ, ಎ.23. ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಅಂಚೆ ಪಾಲಕರೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಪಾಣೆ ಮಂಗಳೂರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ನಿಂತಿಕಲ್ ಕುಳಾಯಿತೋಡಿ ನಿವಾಸಿ ಕರಿಕ್ಕಳ ಅಂಚೆ ಕಛೇರಿಯ ನಿವೃತ್ತ ಅಂಚೆ ಪಾಲಕ ಯಶವಂತ ಅಡ್ಕಾರ್(66) ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯ ಕಾಣಿಸಿಕೊಂಡು ಖಿನ್ನತೆಗೊಳಗಾಗಿದ್ದ ಅವರು ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಮಗನ ಮನೆಯಲ್ಲಿದ್ದರೆನ್ನಲಾಗಿದೆ. ವಾರದ ಹಿಂದೆ ಊರಿನಲ್ಲಿ ಶುಭ ಕಾರ್ಯಕ್ರಮಗಳು ಇದ್ದುದರಿಂದ ಕುಟುಂಬ ಸಮೇತ ಕರಿಕ್ಕಳದ ಮನೆಗೆ ಬಂದಿದ್ದ ಇವರು ಶನಿವಾರದಂದು ಪುತ್ತೂರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದರೆನ್ನಲಾಗಿದೆ. ಶನಿವಾರ ರಾತ್ರಿ ತನ್ನ ಮಗನಿಗೆ ಕರೆ ಮಾಡಿ ತಾನು ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲಿದ್ದು, ತನ್ನ ಕೊನೆಯ ಮಾತನ್ನಾಡುತ್ತಿದ್ದೇನೆ ಎಂದು ಕರೆಯನ್ನು ಕಡಿತಗೊಳಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.