ಹೊಸ್ಮಠ ಸೇತುವೆ ಬಳಿ ವಾಹನ ತೊಳೆದು ನೀರು ಕಲುಷಿತಗೊಳಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಎ.21. ಇಲ್ಲಿನ ಹೊಸ್ಮಠ ಸೇತುವೆಯ ಬಳಿ ಗುಂಡ್ಯ ಹೊಳೆಗೆ ವಾಹನಗಳನ್ನು ಇಳಿಸಿ ತೊಳೆಯುತ್ತಿರುವುದರಿಂದಾಗಿ ನೀರು ಕಲುಷಿತಗೊಂಡು ಹೊಳೆಯ ನೀರನ್ನು ಉಪಯೋಗಿಸುತ್ತಿರುವವರಿಗೆ ತೊಂದರೆಯಾಗುತ್ತಿರುವುದರಿಂದ ಸಂಬಂಧ ಪಟ್ಟವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಿರು ಬೇಸಗೆಯಾಗಿರುವುದರಿಂದ ಹೊಳೆಯಲ್ಲಿ ನೀರಿನ ಹರಿವು ಕೂಡ ಕಡಿಮೆಯಾಗಿದೆ. ಹೊಳೆಯ ಬದಿಯ ನಿವಾಸಿಗಳು ತಮ್ಮ ಬಾವಿಗಳಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಕುಡಿಯುವುದಕ್ಕಾಗಿಯೂ ಹೊಳೆಯ ನೀರನ್ನು ಉಪಯೋಗಿಸುತ್ತಿದ್ದಾರೆ. ಅಡುಗೆಗೆ, ಜಾನುವಾರುಗಳಿಗೆ ಹಾಗೂ ಬಟ್ಟೆ ಒಗೆಯುವುದು ಇತ್ಯಾದಿಗಳಿಗೂ ಹೊಳೆಯ ನೀರನ್ನೇ ಆಶ್ರಯಿಸುವಂತಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಹೊಳೆಗೆ ವಾಹನಗಳನ್ನು ಇಳಿಸಿ ತೊಳೆಯುವುದರಿಂದಾಗಿ ನೀರು ಕಲುಷಿತಗೊಳ್ಳುತ್ತಿದೆ. ವಾಹನ ತೊಳೆಯುವ ವೇಳೆ ನೀರಿನಲ್ಲಿ ಸೇರಿಕೊಳ್ಳುವ ತೈಲದ ಅಂಶವು ಆರೋಗ್ಯಕ್ಕೆ ಹಾನಿಕರವೂ ಹೌದು. ಆದುದರಿಂದ ಸ್ಥಳೀಯ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಹೊಳೆಯ ನೀರನ್ನು ಮಲಿನಗೊಳಿಸದಂತೆ ತಡೆಗಟ್ಟಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Also Read  ಪರಿಶಿಷ್ಟ ಪಂಗಡದವರಿಗೆ ಡ್ರೋನ್ ತರಬೇತಿ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

  • ಎಲ್ಲೆಡೆ ನೀರಿನ ಕೊರತೆ ಎದುರಾಗಿರುವುದರಿಂದ ಸಾಕಷ್ಟು ಜನ ಹೊಳೆಯ ನೀರನ್ನೇ ಕುಡಿಯುವುದಕ್ಕಾಗಿ ಮತ್ತು ಅಡುಗೆಗೆ ಬಳಸುತ್ತಿದ್ದಾರೆ. ಆದರೆ ನೀರಿನ ಹರಿವು ಕಡಿಮೆ ಇರುವ ಹೊಳೆಯಲ್ಲಿ ವಾಹನ ತೊಳೆಯುವುದರಿಂದ ನೀರು ಮಲಿನಗೊಳ್ಳುತ್ತಿದೆ. ವಾಹನಗಳ ತೈಲಮಿಶ್ರೀತ ಕಲುಷಿತ ನೀರನ್ನು ಉಪಯೋಗಿಸುವ ಜನರು ಹಾಗೂ ಜಾನುವಾರುಗಳ ಆರೋಗ್ಯ ಕೆಡುವ ಭೀತಿಯೂ ಇದೆ. ಆದುದರಿಂದ ಸಂಬಂಧಪಟ್ಟವರು ಈ ಕುರಿತು ಗಮನಹರಿಸಬೇಕಿದೆ.
    -ಡಾ|ರಾಜೇಶ್ ಬೀರಂತಡ್ಕ, ಪರಿಸರ ಅಧ್ಯಯನಕಾರರು.
  • ಈ ಹಿಂದೆ ಸಾರ್ವಜನಿಕರ ದೂರಿನಂತೆ ಹೊಳೆಯ ನೀರನ್ನು ಮಲಿನಗೊಳಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ವಾಹನಗಳನ್ನು ಹೊಳೆಗೆ ಇಳಿಸುವ ರಸ್ತೆಗೆ ಕಂದಕ ನಿರ್ಮಿಸಿ ವಾಹನ ಇಳಿಸದಂತೆ ತಡೆಯೊಡ್ಡಲಾಗಿತ್ತು. ಇದೀಗ ಮತ್ತೆ ಹೊಳೆಯ ನೀರು ಮಲಿನಗೊಳಿಸುವ ಕುರಿತು ಮಾಹಿತಿ ಲಭಿಸಿದೆ. ಹೊಳೆಯ ನೀರನ್ನು ಮಲಿನಗೊಳಿಸದಿರುವಂತೆ ಪಂಚಾಯತ್ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    -ವಿಲ್ಪ್ರೆಡ್ ಲಾರೆನ್ಸ್‌ ರೋಡ್ರಿಗಸ್, ಕುಟ್ರುಪ್ಪಾಡಿ ಗ್ರಾ.ಪಂ.ಪಿಡಿಒ
Also Read  ಮಂಗಳೂರು: ರೌಡಿಶೀಟರ್ ಹತ್ಯೆ ಪ್ರಕರಣ ➤ ಎಂಡು ಮಂದಿ ಪೊಲೀಸರ ವಶಕ್ಕೆ

 

error: Content is protected !!
Scroll to Top