ಕರೋಪಾಡಿ ಗ್ರಾ.ಪಂ. ಉಪಚುನಾವಣೆ ► ದುಷ್ಕರ್ಮಿಗಳಿಗೆ ಬಲಿಯಾದ ಜಲೀಲ್ ಕರೋಪಾಡಿಯವರ ಸಹೋದರನಿಗೆ ಜಯ

(ನ್ಯೂಸ್ ಕಡಬ) newskadaba.com ವಿಟ್ಲ, ಜು.05. ಕರೋಪಾಡಿ ಗ್ರಾಮ ಪಂಚಾಯತ್ನ ಮಿತ್ತನಡ್ಕ ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಅಬ್ದುಲ್ ಜಲೀಲ್ ಕರೋಪಾಡಿ ಅವರ ಸಹೋದರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನ್ವರ್ ಕರೋಪಾಡಿ 449 ಮತಗಳನ್ನು ಗಳಿಸುವ ಮೂಲಕ ಜಯಗಳಿಸಿದ್ದಾರೆ.

ಅನ್ವರ್ ಕರೋಪಾಡಿಯವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಕೋಡ್ಲ 320 ಮತಗಳನ್ನು ಗಳಿಸಿದ್ದಾರೆ. ಜುಲೈ 2ರಂದು ಮಿತ್ತನಡ್ಕ ಸರಕಾರಿ ಶಾಲೆಯಲ್ಲಿ ಮತದಾನ ನಡೆದಿದ್ದು 790 ಮತಗಳು ದಾಖಲಾಗಿತ್ತು. ಅವುಗಳಲ್ಲಿ 21 ಮತಗಳು ತಿರಸ್ಕೃತಗೊಂಡಿದೆ ಎಂದು ಬಂಟ್ವಾಳ ತಾಲೂಕು ಚುನವಣಾ ಶಾಖೆಯ ಪ್ರಕಟಣೆ ತಿಳಿಸಿದೆ. ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಹತ್ಯೆಯಿಂದ ಮಿತ್ತನಡ್ಕ ವಾರ್ಡ್ ತೆರವಾಗಿತ್ತು. ಅಬ್ದುಲ್ ಜಲೀಲ್ ರವರ ಸಹೋದರ ಅನ್ವರ್ ಕರೋಪಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು.
ಮತ ಎಣಿಕಾ ಕೇಂದ್ರಕ್ಕೆ ವಿಟ್ಲ ಠಾಣೆ ಎಸ್ಸೈ ನಾಗರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಕರೋಪಾಡಿ ಗ್ರಾಮದ ಮಿತ್ತನಡ್ಕ ವಾರ್ಡ್ಗೆ ನಡೆದ ಚುನಾವಣೆಯಲ್ಲಿ ವಿಜೇತರಾದ ಮುಹಮ್ಮದ್ ಅನ್ವರ್ ಹಾಗೂ ಕರೋಪಾಡಿ ಗ್ರಾಮದ ಕಾಂಗ್ರೆಸ್ ಮುಖಂಡರು ಸಚಿವ ಬಿ.ರಮಾನಾಥ ರೈರವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಚಿವರು ಅನ್ವರ್ರವರನ್ನು ಅಭಿನಂದಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

Also Read  ಭತ್ತ ಬೆಳೆಗಾರರಿಗೆ “ಕರಾವಳಿ ಪ್ಯಾಕೇಜ್” ➤ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಅಭಿನಂದನೆ: ಕರೋಪಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಎ.ಮುಹಮ್ಮದ್ ಅನ್ವರ್ ಕರೋಪಾಡಿ ಹಾಗೂ ಬೋಳಂತೂರು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾದ ಆಶಾ ಬೋಳಂತೂರುರವರನ್ನು ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್, ಅಬ್ದುಲ್ ಜಲೀಲ್ ಕರೋಪಾಡಿಯವರ ಜನಪರ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಗ್ರಾಮದ ಜನತೆ ಅವರ ಸಹೋದರ ಅನ್ವರ್ರವರಿಗೆ ಆಶೀರ್ವಾದ ಮಾಡಿದ್ದಾರೆ ಎಂದರು. ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ, ಅನ್ವರ್ರವರ ವಿಜಯ ಅಬ್ದುಲ್ ಜಲೀಲ್ರವರ ಜನಪರ ಮತ್ತು ಸೌಹಾರ್ದತೆ ಹಾಗೂ ಸಚಿವ ಬಿ.ರಮಾನಾಥ ರೈರವರ ಅಭಿವೃದ್ಧಿ ಕೆಲಸಕ್ಕೆ ಸಿಕ್ಕಿರುವ ಜಯವಾಗಿದೆ ಎಂದು ಹೇಳಿದರು.
ಮಹಮ್ಮದ್ ಅನ್ವರ್ ಮಾತನಾಡಿ ನನ್ನನ್ನು ಗೆಲ್ಲಿಸಿದ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಗೆಲುವಿನ ಮೂಲಕ ಜಲೀಲ್ ಆತ್ಮಕ್ಕೆ ಶಾಂತಿ ದೊರಕಿದೆ ಎಂದರು. ತಾಲೂಕು ಪಂಚಾಯತ್ ಸದಸ್ಯ ಚಂದ್ರಹಾಸ ಕರ್ಕೇರ, ಬಾಳಪ್ಪ ಶೆಟ್ಟಿ, ಮುಹಮ್ಮದ್ ಅನ್ವರ್, ಮೂಸಬ್ಬ, ವಿಜಯ ಪುಜಾರಿ, ಪುತ್ತುಮೋನು, ರಹೀಂ ಮಿತ್ತನಡ್ಕ, ಸಿದ್ದೀಕ್, ರಝಾಕ್ ಸೇರಾಜೆ, ಶಗೀರ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top