ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಸತೀಶ್ ಭಟ್ ಬಿಳಿನೆಲೆ ಆಯ್ಕೆ



ಕಡಬ, ಸೆ.04. ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಡಬ ತಾಲೂಕಿನಿಂದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯಗುರುಗಳಾದ ಸತೀಶ್ ಭಟ್ ಬಿಳಿನೆಲೆಯವರು ಆಯ್ಕೆಯಾಗಿದ್ದಾರೆ.







1989 ರಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರು ಸುಮಾರು 22 ವರ್ಷಗಳ ಕಾಲ ಬಿಳಿನೆಲೆಯಲ್ಲಿ ಸೇವೆ ಸಲ್ಲಿಸಿ 2011ರಲ್ಲಿ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ವಿಜ್ಞಾನ ಅಧ್ಯಾಪಕರಾಗಿ ಸೇವೆ ಆರಂಭಿಸಿದರು. 2014 ರಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ ಇವರು ತನ್ನದೇ ವಿಶೇಷ ಪ್ರತಿಭೆಯಿಂದಾಗಿ ಹಲವಾರು ತರಬೇತಿಗಳ‌ ಮೂಲಕ ಸಾವಿರಾರು ಶಿಷ್ಯರಿಗೆ ವಿಶೇಷ ಮಾರ್ಗದರ್ಶನ ನೀಡುವ ಮೂಲಕ ಉನ್ನತ ಸ್ಥಾನಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.






ಅತ್ಯಂತ ಗ್ರಾಮೀಣ ಪ್ರದೇಶವಾದ ರಾಮಕುಂಜದ ಶ್ರೀ ರಾಮಕುಂಜೇಶ್ವರ ಶಾಲೆಗೆ ಪ್ರತಿವರ್ಷ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅತ್ಯಂತ ಪರಿಶ್ರಮದಿಂದ ಶೇಕಡಾ 90 ಕ್ಕಿಂತ ಹೆಚ್ಚು ಫಲಿತಾಂಶ ಬರುತ್ತಿದ್ದು, ಜಿಲ್ಲಾಮಟ್ಟದಲ್ಲಿ ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ಕಾರ್ಯಾಗಾರಗಳಲ್ಲಿ ತರಬೇತಿಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಜೊತೆಗೆ ಯೋಗ ಶಿಕ್ಷಕನಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇವರಿಂದ ಯೋಗ ಕಲಿತ ವಿದ್ಯಾರ್ಥಿಗಳು ಇಂದು ಯೋಗ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರೌಢಶಾಲಾ ವಿಭಾಗದ ಹಿರಿಯ ಪದವೀಧರ ಸಹಾಯಕನಾಗಿ 2015 ರಿಂದ ಕಾರ್ಯ ನಿರ್ವಹಿಸುತ್ತಿರುವ ಇವರು NMMS, NTSE ಪರೀಕ್ಷೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕಳೆದ 3 ವರುಷಗಳಿಂದ NMMS ಪರೀಕ್ಷೆಯಲ್ಲಿ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯು ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯದಲ್ಲಿ 4-5 ಸ್ಥಾನವನ್ನು ಪಡೆಯುವುದರ ಹಿಂದೆ ಇವರ ಶ್ರಮ ಅಗಾಧವಾಗಿದೆ.

ಕಲಿಕಾ ವಾತಾವರಣವನ್ನು ಉತ್ತೇಜಿಸುವುದಕ್ಕಾಗಿ ವಿಜ್ಞಾನ ಪ್ರಯೋಗಾಲಯ ಮತ್ತು ಗಣಿತ ಪ್ರಯೋಗಾಲಯವನ್ನು ಆರಂಭಿಸುವ ಮೂಲಕ ಸಂತಸದ ಕಲಿಕೆಗೆ ಆದ್ಯತೆ ನೀಡಲಾಗಿದ್ದು, ಭಾಷಾ ಪ್ರಯೋಗಾಲಯವನ್ನು ಆರಂಭಿಸಿ ಈ ಮೂಲಕ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ.

ಶಿಕ್ಷಕರಾಗಿದ್ದುಕೊಂಡು ಸಾಮಾಜಿಕ ಹೊಣೆಗಾರಿಕೆಯಲ್ಲೂ ಮುಂಚೂಣಿಯಲ್ಲಿರುವ ಇವರು, ಅಂತರ್ರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೇಸಿಐ ಭಾರತದ ರಾಷ್ಟ್ರೀಯ ತರಬೇತುದಾರರಾಗಿಯೂ ನೇಮಕಗೊಂಡು ನೂರಾರು ತರಬೇತಿಗಳನ್ನು ನೀಡುವ ಮೂಲಕ‌ ತಾನು ಓರ್ವ ವಿಶೇಷ ಚಿಂತಕ ಅನ್ನುವುದನ್ನು ಸಾಬೀತುಪಡಿಸಿದ್ದಾರೆ.

error: Content is protected !!
Scroll to Top