ಬಂಟ್ವಾಳ: ಚಂದ್ರಗ್ರಹದ ಅಂಗಳದಂತಾದ ಬ್ರಹ್ಮರಕೋಟ್ಲು ಟೋಲ್ ಪ್ಲಾಜಾದ ಬಳಿಯ ಸರ್ವೀಸ್ ರಸ್ತೆ



(ನ್ಯೂಸ್ಕಡಬ) newskadaba.com, ಸೆ. 03  ಬಂಟ್ವಾಳ : ಬ್ರಹ್ಮರಕೋಟ್ಲು ಟೋಲ್ ಪ್ಲಾಜಾದ ಬಳಿಯ ಸರ್ವೀಸ್ ರಸ್ತೆಯು ನೋಡಲು ರಸ್ತೆಯಂತಿದ್ದರೂ, ಚಂದ್ರಗ್ರಹದ ಅಂಗಳದಂತಾಗಿದೆ.







ಬ್ರಹ್ಮರಕೋಟ್ಲು ಟೋಲ್ ಪ್ಲಾಜಾದ ಬಳಿಯ ಸರ್ವೀಸ್ ರಸ್ತೆಯು ಸದಾ ಒಂದಲ್ಲಾ ಒಂದು ಕಾರಣದಿಂದಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಇಲ್ಲಿನ ರಸ್ತೆಯ ಸಮಸ್ಯೆ ಬಗ್ಗೆ ಸಾರ್ವಜನಿಕ ಆರೋಪಗಳು ಕೇಳಿಬಂದಿದ್ದು, ರಸ್ತೆ ರಿಪೇರಿ ಮಾಡಿ ಕೊಡಿ ಎಂಬ ಒತ್ತಾಯಗಳು ಕೇಳಿ ಬಂದಿವೆ.






ರಾ.ಹೆ.75 ರ ಬಿ.ಸಿ.ರೋಡು ಸಮೀಪದ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಬಳಿಯ ಸರ್ವೀಸ್ ರಸ್ತೆಯು ಅವ್ಯವಸ್ಥೆಯಿಂದ ಕೂಡಿದ್ದು, ಅದನ್ನು ಹೇಳೋರು ಇಲ್ಲ, ಕೇಳೋರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಿ.ಸಿ.ರೋಡಿನಿಂದ ಸರ್ವೀಸ್ ರಸ್ತೆಯಲ್ಲಿ ಸಾಗಿದ ವಾಹನಗಳು ಬ್ರಹ್ಮರಕೋಟ್ಲು ಎಂಬಲ್ಲಿ ಹೆದ್ದಾರಿ ಸೇರುವ ಭಾಗದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಲಘು ವಾಹನಗಳು ಜಖಂಗೊಳ್ಳುವ ಸ್ಥಿತಿ ಎದುರಾಗಿದೆ. ಈ ಹದಗೆಟ್ಟ ರಸ್ತೆಯ ದುರಸ್ತಿಗೆ ಯಾರೂ ಕ್ರಮವಹಿಸಿಲ್ಲ ಎನ್ನಲಾಗುತ್ತಿದೆ.

ಹೆದ್ದಾರಿಗೆ ಸಂಪರ್ಕಿಸುವ ಏರು ರಸ್ತೆಯಲ್ಲಿ ಒಂದು ಅಡಿಗೂ ಆಳದ ಬೃಹತ್ ಗುಂಡಿಗಳಿದ್ದು, ಸಣ್ಣ ಕಾರುಗಳ ತಳ ಭಾಗಕ್ಕೆ ತಾಗಿ ನಿತ್ಯವೂ ವಾಹನಗಳಿಗೆ ಹಾನಿಯಾಗುತ್ತಿದೆ. ಇದರಿಂದ ವಾಹನಗಳು ಜಖಂಗೊಂಡ ಉದಾಹರಣೆಗಳು ಕೂಡ ಸಾಕಷ್ಟಿದೆ. ಈ ಭಾಗದಲ್ಲಿ ವಾಹನ ಸಂಚರಿಸುವ ಸಂದರ್ಭ ಗುಡ್ಡ ಹತ್ತುವ ಅನುಭವವಾಗಿದ್ದು, ಕಾರುಗಳ ಚಕ್ರಗಳು ಸಂಪೂರ್ಣವಾಗಿ  ಹೊಂಡದಲ್ಲಿ ಮುಳುಗಿ ಹೋಗುತ್ತದೆ.

ಸ್ಥಳೀಯ ವಾಹನಗಳು ನಿತ್ಯವೂ 3-4  ಬಾರಿ ಸಂಚರಿಸುವ ಸಂದರ್ಭ ಟೋಲ್ ಕಟ್ಟಿ ಸಾಗುವುದು ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸರ್ವೀಸ್ ರಸ್ತೆಗಳಿದ್ದು, ಆದರೆ ಈಗ ಇಂತಹ ರಸ್ತೆಯಲ್ಲಿ ಸಾಗುವುದಕ್ಕಿಂತ ಟೋಲ್ ಪಾವತಿಸಿ ಹೋಗುವುದೇ ಉತ್ತಮ ಎಂಬ ಸ್ಥಿತಿ ಇದೆ ಎಂದು ಸ್ಥಳೀಯ ವಾಹನ ಮಾಲಕರು ತಿಳಿಸಿದ್ದಾರೆ.

ಆದರೆ ಸ್ಥಳೀಯ ವಾಹನಗಳು ಟೋಲ್ ಪಾವತಿಸಿ ಹೋಗುವುದು ಸಾಧ್ಯವಿದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ವಾಹನಗಳು ಟೋಲ್ ತಪ್ಪಿಸಿಕೊಂಡು ಸರ್ವೀಸ್ ರಸ್ತೆಯಲ್ಲಿ ಸಾಗುತ್ತವೆ ಎಂಬ ಕಾರಣಕ್ಕೆ ಈ ಹೊಂಡಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಾಗೇ ಬಿಟ್ಟಿರುವ ಸಾಧ್ಯತೆ ಇದೆಯಾದರೂ ಇಲ್ಲಿನ ಸ್ಥಳೀಯ ವಾಹನ ಸವಾರರಿಗೆ ತೊಂದರೆಯಾಗಿದೆ. ಟೋಲ್ ತಪ್ಪಿಸಿಕೊಂಡು ಸಾಗುವ ವಾಹನಗಳು ಸರ್ವೀಸ್ ರಸ್ತೆಯನ್ನು ಬಿಟ್ಟು ಹೆದ್ದಾರಿಯಲ್ಲೇ ಸಾಗಬೇಕು ಎಂದು ಈ ರೀತಿ ಮಾಡಿರುವುದು ನಿಜವಾದರೆ, ಅದರಿಂದ ಸ್ಥಳೀಯ ವಾಹನದವರು ತೊಂದರೆ ಅನುಭವಿಸುವಂತಾಗಿದೆ.

ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ಸರ್ವೀಸ್ ರಸ್ತೆಯ ಹೊಂಡಗಳನ್ನು ಮುಚ್ಚಿ ಶಾಶ್ವತ ಪರಿಹಾರ ನೀಡುವಂತೆ ದ.ಕ.ಜಿಲ್ಲಾಧಿಕಾರಿಗಳು ಎನ್‌ಎಚ್‌ಎಐಗೆ ಸೂಚನೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

.

error: Content is protected !!
Scroll to Top