(ನ್ಯೂಸ್ ಕಡಬ) newskadaba.com, ಆ. 28. ಟೆಕ್ಕಿ ಯುವತಿಯೊಬ್ಬರು ಅಮೇರಿಕಾದಲ್ಲಿ ಕುಳಿತೇ ತನ್ನ ಮನೆಯಲ್ಲಿ ನಡೆಯಬಹುದಾದ ಕಳ್ಳತನವನ್ನು ತಪ್ಪಿಸಿದ್ದಾರೆ.
ಬಾಗಲಕೋಟೆಯ ಮುಧೋಳ ನಗರದ ಸಿದ್ರಾಮೇಶ್ವರ ಕಾಲೋನಿಯಲ್ಲಿ ನೆಲೆಸಿರುವ ನಿವೃತ್ತ ಎಂಜಿನಿಯರ್ ಹನುಮಂತಗೌಡ ಅವರ ಪುತ್ರಿ ಶೃತಿ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ. ಕೆಲ ವರ್ಷಗಳ ಹಿಂದೆ ಸ್ವದೇಶಕ್ಕೆ ಆಗಮಿಸಿದ್ದಾಗ ಶೃತಿ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಅಲ್ಲದೇ, ಅದರ ದೃಶ್ಯ ತನ್ನ ಮೊಬೈಲ್ಗೆ ಬರುವಂತೆ ಸಿಂಕ್ ಮಾಡಿಕೊಂಡಿದ್ದರು.
ಮಂಗಳವಾರ ತಡರಾತ್ರಿ 1-2 ಗಂಟೆಯ ಮಧ್ಯೆ ಚಡ್ಡಿ ಗ್ಯಾಂಗ್ ನ ಇಬ್ಬರು ಹನುಮಂತಗೌಡ ಸಂಕಪ್ಪನವರ್ ಮನೆಗೆ ನುಗ್ಗಿದ್ದಾರೆ. ಮುಧೋಳದಲ್ಲಿ ಮಧ್ಯರಾತ್ರಿ ಆಗಿದ್ದರೆ, ಅಮೇರಿಕಾದಲ್ಲಿ ಮಧ್ಯಾಹ್ನ 3.30ರ ಸಮಯವದು. ಹೀಗೆ ಶೃತಿ ಮೊಬೈಲ್ ನೋಡುತ್ತಿದ್ದಾಗ ಕಳ್ಳರು ಮನೆಗೆ ನುಗ್ಗಿದ ದೃಶ್ಯವನ್ನು ನೋಡಿದ್ದಾರೆ. ಕೂಡಲೇ ಶೃತಿ ಪೋಷಕರಿಗೆ ಕರೆ ಮಾಡಿದ್ದಾರೆ.
ಈ ವೇಳೆ ಪೋಷಕರು ಬಾಗಿಲು ತೆರೆದು ಮನೆಯ ಎಲ್ಲಾ ಲೈಟ್ ಗಳನ್ನು ಆನ್ ಮಾಡಿ ಕೂಗಿದ್ದಾರೆ. ದಿಢೀರ್ ಮನೆಯ ಲೈಟ್ ಆನ್ ಆಗಿದ್ದನ್ನು ಕಂಡು ಚಡ್ಡಿ ಗ್ಯಾಂಗ್ ಪರಾರಿಯಾಗಿದ್ದಾರೆ.
ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಹಾವಳಿ ಜೋರಾಗಿದ್ದು, ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












