(ನ್ಯೂಸ್ ಕಡಬ) newskadaba.com, ಆ.26 : ರಸ್ತೆ ಗುಂಡಿಗಳನ್ನು ಒಂದೆರಡು ನಿಮಿಷಗಳಲ್ಲಿ ಮುಚ್ಚಬಹುದಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಅಳವಡಿಸಿತ್ತಿರುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಿನ್ನೆ ರಾತ್ರಿ 12.30ರ ಸುಮಾರಿಗೆ ಬಾಗಲೂರು ಬಸ್ ನಿಲ್ದಾಣ ಹಾಗೂ ಇತರ ಮೂರು ಕಡೆ ರಸ್ತೆ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದ ಬಳಿಕ ಡಿ.ಕೆ .ಶಿವಕುಮಾರ್ ಸುದ್ದಿಗಾರರ ಜೊತೆ ಮಾತನಾಡಿದರು.
ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ನಗರದ ಶಾಸಕರೆಲ್ಲರೂ ತಮ ಗಮನಕ್ಕೆ ತಂದಿದ್ದರು. ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ರಸ್ತೆ ಗುಂಡಿ ಗಮನ ತಂತ್ರಾಂಶ (ಆ್ಯಪ್) ಸಿದ್ದಪಡಿಸಿದ್ದೇವೆ. ಪೊಲೀಸರಿಗೂ ಅವರ ಠಾಣೆಗಳ ವ್ಯಾಪ್ತಿಯಲ್ಲಿ ಗುಂಡಿಗಳಿರುವ ಪಟ್ಟಿ ಕೊಡಲು ತಿಳಿಸಲಾಗಿತ್ತು. ಅದರಂತೆ ಪಟ್ಟಿ ನೀಡಿದ್ದಾರೆ. ಆ್ಯಪ್‌ನಲ್ಲಿ ನಾಗರೀಕರು ರಸ್ತೆಗುಂಡಿಗಳ ಫೋಟೋಗಳನ್ನು ಕಳುಹಿಸುತ್ತಾರೆ. ಬಿಬಿಎಂಪಿನ ಅಧಿಕಾರಿಗಳು ತಕ್ಷಣವೇ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳುತ್ತಾರೆ ಎಂದರು.
ಇತ್ತೀಚೆಗೆ ಬಾಗಲೂರು ರಸ್ತೆಯಲ್ಲಿ ಹೋದಾಗ ರಸ್ತೆ ಸ್ಥಿತಿ ನೋಡಿ ಬೇಸರವಾಗಿತ್ತು. ನಗರದ ಎಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. 5 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 4400 ರಸ್ತೆ ಗುಂಡಿಗಳನ್ನು ಆದ್ಯತೆ ಮೇಲೆ ಮುಗಿಸಲು ಸೂಚನೆ ನೀಡಲಾಗಿದೆ. ಅದರಂತೆ ಕಳೆದ 4 ದಿನಗಳಿಂದ 2200 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು.













