ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ನೂತನ ಪಕ್ಷ ಅಸ್ತಿತ್ವಕ್ಕೆ ► ಪುತ್ತೂರು ವಿಧಾನಸಭಾ ಕ್ಷೇತ್ರದ ಸಸಂತ್ರ ತುಳುನಾಡು ಪಕ್ಷದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್. ಕಣಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.15. ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ಸಸಂತ್ರ ತುಳುನಾಡು ಪಕ್ಷ ಉದಯಿಸಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್‌. ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಸ್ಥಾಪಕಾಧ್ಯಕ್ಷ ಶೈಲೇಶ್‌ ಆರ್‌. ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಂತ ತುಳುನಾಡಿನ ಸಂಪನ್ಮೂಲವನ್ನು ತುಳುನಾಡಿನ ಪ್ರಗತಿಗೆ ವಿನಿಯೋಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳು ತುಳು ಭಾಷೆಗೆ ಸ್ಥಾನಮಾನ ನೀಡಲು ವಿಫಲವಾಗಿದ್ದು, ಎತ್ತಿನಹೊಳೆ ಯೋಜನೆಯ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಅನುಮೋದನೆ ನೀಡಿ ಪ್ರತಿಭಟನೆಯ ನಾಟಕ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳು ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಕಾಳಜಿ ತೋರಿಸುತ್ತಿಲ್ಲವಾದುದರಿಂದ ಐದಾರು ವರ್ಷಗಳ ಹಿಂದೆಯೇ ತುಳುನಾಡು ಪಕ್ಷವನ್ನು ಸ್ಥಾಪಿಸಿ ಕಣಕ್ಕಿಳಿಯುವ ಗುರಿಯನ್ನು ಹೊಂದಲಾಗಿತ್ತು. ಅದರಂತೆ ಇದೀಗ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು ಮುಂಬರುವ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದರು.

Also Read  ಲಾರಿಗೆ ವಿದ್ಯುತ್ ತಂತಿ ಸಿಲುಕಿ ರಸ್ತೆಗೆ ವಾಲಿದ ವಿದ್ಯುತ್ ಕಂಬ - ತಪ್ಪಿದ ಭಾರೀ ದುರಂತ

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಹಾಗೂ ಪ್ರತ್ಯೇಕ ತುಳುನಾಡು ರಾಜ್ಯ ಆಗಬೇಕು. ತುಳುನಾಡಿನಲ್ಲಿ ಬ್ಯಾಂಕ್‌, ಕಚೇರಿ, ರೈಲ್ವೇ ಸೇರಿದಂತೆ ವಿವಿಧ ಸರಕಾರಿ ಹುದ್ದೆಗಳಿಗೆ ಹಿಂದಿ, ಮಲಯಾಳಂ, ತಮಿಳು ಭಾಷಿಗರನ್ನು ನೇಮಿಸಲಾಗಿದ್ದು, ತುಳುನಾಡಿನ ಜನರು ಅವಕಾಶದಿಂದ ವಂಚಿತರಾಗಿದ್ದಾರೆ‌. ಇಂತಹ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಸಂತ್ರ ತುಳುನಾಡು ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಪುತ್ತೂರಿನಿಂದ ಪಡುಮಲೆ ನಿವಾಸಿ ವಿದ್ಯಾಶ್ರೀ, ಕಾರ್ಕಳದಿಂದ ಸುಮಂತ್‌ ಕೆ. ಪೂಜಾರಿಯವರು ಚುನಾವಣೆಯನ್ನು ಎದುರಿಸಲಿದ್ದು, ಕೆಲವೇ ದಿನಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರಗಳಿಗೆ ಅರ್ಹ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ದಿನೇಶ್‌ ರೈ ಕಡಬ ಅವರು ಹೇಳಿದರು.

ವೇದಿಕೆಯಲ್ಲಿ ಸಸಂತ್ರ ತುಳುನಾಡು ಪಕ್ಷದ ಅಭ್ಯರ್ಥಿ ವಿದ್ಯಾಶ್ರೀ ಎಸ್‌., ಜೈ ತುಳುನಾಡು ಸಂಘಟನೆಯ ಯತೀಶ್‌ ಕುಮಾರ್‌ ಮುಂಡೋಡಿ, ರಾಜೇಶ್‌ ಕುಲಾಲ್‌, ವಿದ್ಯಾಶ್ರೀ ಅವರ ಪತಿ ಜಿ. ಸುಧಾಕರ್‌ ಉಳ್ಳಾಲ್‌ ಉಪಸ್ಥಿತರಿದ್ದರು.

Also Read  ಪಿಂಚಣಿ ವಂಚಿತ ವಿಕಲಚೇತನರನ್ನು ಗುರುತಿಸಲು ತಹಶೀಲ್ದಾರ್ ಸೂಚನೆ

error: Content is protected !!
Scroll to Top