(ನ್ಯೂಸ್ ಕಡಬ) newskadaba.com ಆ.14: ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಂಚನೆಗೆ ಯತ್ನಿಸಲಾಗಿದೆ. ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.
ದೂರು ಆಧರಿಸಿ, ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಸಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಸೆಕ್ಷನ್ ಅನಧಿಕೃತವಾಗಿ ಇತರರ ಡಿಜಿಟಲ್ ಗುರುತಿನ ಪ್ರಮಾಣಗಳನ್ನು ಬಳಸುವ ಮೂಲಕ ವಂಚನೆ ಮಾಡುವುದು ಅಥವಾ ವೈಯಕ್ತಿಕ ಮಾಹಿತಿಯನ್ನು ದುರಪಯೋಗಿಸುವ ಕುರಿತಾದ ಅಪರಾಧಗಳಿಗೆ ಸಂಬಂಧಿಸಿದೆ.
ಅನುಮಾನಾಸ್ಪದ ವ್ಯಕ್ತಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದಿರುವುದು ಮಾತ್ರವಲ್ಲದೆ, ಆ ಖಾತೆಯಿಂದ ಸಂದೇಶಗಳನ್ನು ಕಳಿಸಲಾಗುತ್ತಿದೆ. ಈ ಮೂಲಕ ಸಾರ್ವಜನಿಕರನ್ನು ಭ್ರಮೆಗೆ ಒಳಪಡಿಸುವ ಹಾಗೂ ವಂಚಿಸಲು ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ













