ಸವಣೂರು: ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

(ನ್ಯೂಸ್ ಕಡಬ) newskadaba.com ಸವಣೂರು, ಎ.11. ಸವಣೂರು ಯುವಕ ಮಂಡಲವು ಸಮಾಜಕ್ಕೆ ಹಲವು ನಾಯಕರನ್ನು ಕೊಡುಗೆಯಾಗಿ ನೀಡಿದೆ. ತಾವೂ ಬೆಳೆದು ಇತರರನ್ನು ಬೆಳೆಸುವು ಇಲ್ಲಿನ ಯುವಕ ಮಂಡಲದ ಹೆಗ್ಗಳಿಕೆ. ಸದಾ ಸಮಾಜಮುಖಿ ಚಿಂತನೆಯ ಯುವ ಸಮೂಹ ದೇಶದ ಅಭಿವೃದ್ದಿಗೆ ಪೂರಕ ಎಂದು ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ ಹೇಳಿದರು. ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ ಹಾಗೂ ತಾ.ಉತ್ತಮ ಯುವ ಮಂಡಲಿ ಪ್ರಶಸ್ತಿ, ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಮಾಜದಲ್ಲಿ ಯುವಕರು ಯಾವ ರೀತಿ ಇರಬೇಕು, ಸಾಮಾಜಿಕ ಬದ್ದತೆ ಇರುವ ಯುವಕ ಮಂಡಲ ಹೇಗಿರಬೇಕು ಎಂಬುದನ್ನು ಸವಣೂರು ಯುವಕ ಮಂಡಲ ತೋರಿಸಿಕೊಟ್ಟಿದೆ. ದಾರಿ ತಪ್ಪುತ್ತಿರುವ ಯುವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯುವಕ ಮಂಡಲದ ಪಾತ್ರ ಮಹತ್ವದ್ದು. ತನ್ನ ಕಾರ್ಯ ಚಟುವಟಿಕೆಯಿಂದ ರಾಜ್ಯದಲ್ಲೇ ಮಾದರಿ ಯುವಕ ಮಂಡಲವಾಗಿ ಸವಣೂರಿನ ಯುವಕ ಮಂಡಲ ಗುರುತಿಸಿಕೊಂಡಿದೆ ಎಂದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು ಮಾತನಾಡಿ, ಸವಣೂರು ಯುವಕ ಮಂಡಲವೂ ತನ್ನ ವೈಶಿಷ್ಟ್ಯ ಕಾರ್ಯ ಚಟುವಟಿಕೆಯಿಂದ ಎಲ್ಲಾ ಯುವ ಮಂಡಲಿಗಳಿಗೆ ಮಾದರಿಯಾಗಿದೆ. ಯುವ ಸಪ್ತಾಹ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿರುವ ಏಕೈಕ ಯುವಕ ಮಂಡಲವಾಗಿ ಸವಣೂರು ಯುವಕ ಮಂಡಲ ಗುರುತಿಸಿಕೊಂಡಿದೆ ಎಂದರು.

ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ಮಾತನಾಡಿ, ಸವಣೂರು ಯುವಕ ಮಂಡಲವು ಸಮಾಜದ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಲವು ಏಳು ಬೀಳುಗಳನ್ನೂ ಕಂಡರೂ ಸಮಾನ ಮನಸ್ಕರ ಚಿಂತನೆ ಹಾಗೂ ಉತ್ತಮ ಮಾರ್ಗದರ್ಶನದಿಂದ ಈಗಲೂ ತನ್ನ ಅಸ್ತಿತ್ವ ಮತ್ತು ಘನತೆಯನ್ನು ಉಳಿಸಿಕೊಂಡಿದೆ ಎಂದರು. ಸಾಮಾಜಿಕ ಮುಂದಾಳು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಮಾತನಾಡಿ, ಯುವ ಸಮುದಾಯ ಸಮಾಜದ ಪರಿವರ್ತನೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಇಡೀ ಸಮಾಜಕ್ಕೆ ತೋರಿಸಿಕೊಟ್ಟಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ನಿರ್ದೇಶಕ, ಯುವಕ ಮಂಡಲದ ಮಾಜಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಸವಣೂರು ಯುವಕ ಮಂಡಲವು ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಲು ಉತ್ತಮ ವೇದಿಕೆ. ಯುವಕರು ಸಂಘಟನೆಯ ಮೂಲಕ ಸಮಾಜದ ಆಸ್ತಿಯಾಗಬೇಕು ಎಂದರು.

Also Read  ರಸ್ತೆ ಒತ್ತುವರಿ ತೆರವಿಗೆ ನೀಡಿದ ನೋಟೀಸ್ ಗೆ ತಡೆಯಾಜ್ಞೆ ► ಐತ್ತೂರು ಕೇನ್ಯ ನಿವಾಸಿಗಳಿಂದ ಪ್ರತಿಭಟನೆಯ ಎಚ್ಚರಿಕೆ

ತಾ.ಉತ್ತಮ ಯುವ ಮಂಡಲಿ ಪ್ರಶಸ್ತಿ ,ಯುವ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಸವಣೂರು ಯುವಕ ಮಂಡಲದ ವತಿಯಿಂದ ಪ್ರತೀ ವರ್ಷ ಕೊಡಮಾಡುವ ತಾಲೂಕು ಉತ್ತಮ ಯುವ ಮಂಡಲಿ ಪ್ರಶಸ್ತಿಯನ್ನು ಅರಿಯಡ್ಕ ಗ್ರಾಮದ ಕೌಡಿಚ್ಚಾರು ವಿವೇಕಾನಂದ ಯುವಕ ವೃಂದಕ್ಕೆ ನೀಡಿ ಗೌರವಿಸಲಾಯಿತು. ಉತ್ತಮ ಯುವ ಪ್ರಶಸ್ತಿಯನ್ನು ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್.ವಿ. ಸರ್ವೆದೋಳಗುತ್ತು ಅವರಿಗೆ ನೀಡಿ ಗೌರವಿಸಲಾಯಿತು.

ಸಾಧಕರಿಗೆ ಅಭಿನಂದನೆ
ಕಾರ್ಯಕ್ರಮದಲ್ಲಿ ಕ್ರೀಡಾ ಸಾಧನೆಗೆ ವಸಂತಿ ಶಿವರಾಮ ಗೌಡ ಮೆದು, ಕೃಷಿ ಕ್ಷೇತ್ರದ ಸಾಧನೆಗೆ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ, ವಿವೇಕ್ ಆಳ್ವ ನಡುಮನೆ, ಸೇವಾ ಸಾಧನೆಗೆ ವೇದಾವತಿ ಬಾಲಕೃಷ್ಣ ಗೌಡ ಅಂಜಯ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

Also Read  ಕೆ.ಸಿ.ರೋಡ್: ಹಾಡುಹಗಲೇ ಬ್ಯಾಂಕ್ ದರೋಡೆ ಯತ್ನ

ಸಾಧಕರ ಗುರುತಿಸುವಿಕೆ
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸಾಧಕರನ್ನು ಗುರುತಿಸಲಾಯಿತು.ರಾಜ್ಯ ಯುವ ಸಂಘಗಳ ಪ್ರಧಾನ ಕಾಯರದರ್ಶಿಯಾಗಿ ಆಯ್ಕೆಯಾದ ಸುರೇಶ್ ರೈ ಸೂಡಿಮುಳ್ಳು ,ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಸಚಿನ್ ಎಸ್, ರಾಜ್ಯಮಟ್ಟದ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನಿ ರಾಕೇಶ್ ರೈ ಕೆಡೆಂಜಿ, ರಾಜ್ಯಮಟ್ಟದ ಯಕ್ಷಗಾನ ಸ್ಪರ್ದೆಯಲ್ಲಿ ಪ್ರಥಮ ಸ್ಥಾನಿಯಾದ ತಂಡದಲ್ಲಿದ್ದ ತಾರಾನಾಥ ಸವಣೂರು, ಪ್ರವೀಣ್ ಬಲ್ಯಾಯ, ಪ್ರಸಾದ್ ಆರೆಲ್ತಡಿ ಅವರನ್ನು ಗುರುತಿಸಲಾಯಿತು.

ಯುವಕ ಮಂಡಲದ ಜತೆ ಕಾರ್ಯದರ್ಶಿ ಕುಲಪ್ರಕಾಶ್ ಮೆದು, ಸೇವಾ ವಿಭಾಗದ ಬಾಬು ದೇವಸ್ಯ, ಸಂಘಟನಾ ವಿಭಾಗದ ರಾಮಕೃಷ್ಣ ಪ್ರಭು, ಕಾರ್ಯಕಾರಿ ಸಮಿತಿ ಸದಸ್ಯರಾದ ತಾರಾನಾಥ ಕಾಯರ್ಗ, ದಿವಾಕರ ಬಸ್ತಿ, ಮಹೇಶ್ ಕೆ.ಸವಣೂರು, ಮೋಹನ ದೇವಾಡಿಗ, ಪ್ರಜ್ವಲ ಕೆ.ಆರ್, ಸುಪ್ರಿತ್ ರೈ ಖಂಡಿಗ, ಗಂಗಾಧರ ಸುಣ್ಣಾಜೆ, ಸತೀಶ್ ಬಲ್ಯಾಯ, ಬಾಲಚಂದ್ರ ಕನಡಕುಮೇರು, ಸತೀಶ್ ಅಂಗಡಿಮೂಲೆ, ದಯಾನಂದ ಮೆದು, ರಾಜೇಶ್ ರೈ ಮೊಗರು, ಸಂತೋಷ್ ಕಾಯರ್ಗ, ನವೀನ್ ಮೆದು ಮೊದಲಾದವರು ಉಪಸ್ಥಿತರಿದ್ದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಕಾಶ್ ಮಾಲೆತ್ತಾರು ವಂದಿಸಿದರು. ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ಅಧ್ಯಕ್ಷೆ ಗುರುಪ್ರಿಯಾ ನಾಯಕ್ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಗಿರಿಶಂಕರ ಸುಲಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾರದಾ ಕಲಾ ಆಟ್ರ್ಸ್ ಕಲಾವಿದೆರ್ ಮಂಜೇಶ್ವರ ಅವರ ಅಣ್ಣೆ ಬರ್ಪೆಗೆ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.

Also Read  ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

error: Content is protected !!
Scroll to Top