(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.12. ನಿವೃತ್ತ ಯೋಧರೋರ್ವರ ಮನೆಗೆ ನುಗ್ಗಿ ದರೋಡೆ ಸೇರಿದಂತೆ ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ವಿವಿಧೆಡೆ ನಡೆದ ದರೋಡೆ ಪ್ರಕರಣವನ್ನು ಭೇದಿಸಿರುವ ಉಪ್ಪಿನಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಠಾಣಾ ವ್ಯಾಪ್ತಿಯ ಪೆರಿಯಶಾಂತಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ನೆಲ್ಸನ್(30) ಹಾಗೂ ಇಲ್ಯಾಸ್(34) ಎಂದು ಗುರುತಿಸಲಾಗಿದೆ. ಕಳೆದ ಮಾರ್ಚ್ 21 ರಂದು ಇಚಿಲಂಪಾಡಿಯ ನಿವೃತ್ತ ಯೋಧ ನಾರಾಯಣ ಪಿಳ್ಳೆ ಎಂಬವರ ಮನೆಗೆ ನುಗ್ಗಿದ ಇಬ್ಬರು ಆಗಂತುಕರ ತಂಡವೊಂದು ಮನೆಯಲ್ಲಿದ್ದವರನ್ನು ಚಾಕು, ಚೂರಿ, ಪಿಸ್ತೂಲ್ ತೋರಿಸಿ ಬೆದರಿಸಿ ನಗ – ನಗದು ದರೋಡೆ ಮಾಡಿ ಪರಾರಿಯಾಗಿತ್ತು. ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಉಪ್ಪಿನಂಗಡಿ ಪೊಲೀಸರು 2017 ರ ನವೆಂಬರ್ ನಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೂ, ಇಚಿಲಂಪಾಡಿಯ ದರೋಡೆ ಪ್ರಕರಣಕ್ಕೂ ಸಾಮ್ಯತೆಯನ್ನು ಕಂಡುಬಂದ ಹಿನ್ನೆಲೆಯಲ್ಲಿ ತೀವ್ರ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಗಳ ಬಗ್ಗೆ ತೀವ್ರ ನಿಗಾ ಇರಿಸಿದ್ದ ಉಪ್ಪಿನಂಗಡಿ ಪೊಲೀಸರ ವಿಶೇಷ ತಂಡ ಸೋಮವಾರ ರಾತ್ರಿ ಕೌಕ್ರಾಡಿ ಗ್ರಾಮದ ಪೆರಿಯಶಾಂತಿಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ಪುತ್ತೂರಿನ ಇಚಿಲಂಪಾಡಿ, ಕೆದಿಲ, ಹಾಗೂ ಧರ್ಮಸ್ಥಳದ ಕೆದಿಲ ಎಂಬಲ್ಲಿ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಬೆದರಿಸಿದ್ದಲ್ಲದೆ ದರೋಡೆಗೈದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದಾರೆನ್ನಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.