(ನ್ಯೂಸ್ ಕಡಬ) newskadaba.com ಜು. 04. ಬಿಡುವಿಲ್ಲದ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಗಳು ಅನೇಕ ರೋಗಗಳಿಗೆ ಕಾರಣವಾಗುತ್ತವೆ, ಅವುಗಳಲ್ಲಿ ಒಂದು ಮಧುಮೇಹ. ನಿಮಗೆ ಡಯಾಬಿಟೀಸ್ ರೋಗಿಗಳು ಎಲ್ಲೆಂದರೆಲ್ಲಿ ಖಂಡಿತಾ ಕಾಣಸಿಗುತ್ತಾರೆ. ಆದರೆ ಇದು ಹೆಚ್ಚಾಗಿ ಸಕ್ಕರೆ ಸೇವನೆಯಿಂದ ಬರುತ್ತದೆ ಎಂಬ ನಂಬಿಕೆ ಸಮಾಜದಲ್ಲಿ ಹಲವರಲ್ಲಿದೆ. ಅದಕ್ಕಾಗಿಯೇ ಹೆಚ್ಚು ಸಿಹಿ ತಿನ್ನಬೇಡಿ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು, ಆದರೆ ಇದು ಸಂಪೂರ್ಣ ಸತ್ಯವಲ್ಲ ಎಂದು ಹೇಳುತ್ತಾರೆ ತಜ್ಞರು.
ಹೌದು, ಸಿಹಿ ತಿಂಡಿಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ವೇಗವಾಗಿ ವೃದ್ಧಿಯಾಗುತ್ತದೆ ಹಾಗೂ ಇದು ಆರೋಗ್ಯವಂತ ವ್ಯಕ್ತಿಗಳಲ್ಲಿ ಹೆಚ್ಚು ಪ್ರಮಾಣದ ಇನ್ಸುಲಿನ್ ನ್ನು ತಕ್ಷಣ ಸ್ರವಿಸಲು ಪ್ರೇರೇಪಿಸುತ್ತದೆ. ಇದರಿಂದ ಮೇದೋಜೀರಕ ಗ್ರಂಥಿ ಹಾಗೂ ಚಯಾಪಚಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅಲ್ಲದೇ, ಸಿಹಿ ತಿಂಡಿಗಳಲ್ಲಿ ಸಾಮಾನ್ಯವಾಗಿ ಇತರ ಪೋಷಕಾಂಶಗಳು ಹಾಗೂ ನಾರಿನಂಶದ ಅಭಾವವಿರುತ್ತದೆ. ಇಂಥ ಆಹಾರ ಪದ್ಧತಿ ಮಧುಮೇಹ ಉಂಟಾಗಲು ಪೂರಕವಾಗುತ್ತದೆ. ಆದರೆ, ಮಧುಮೇಹ ಉಂಟಾಗಲು ಇದೊಂದೇ ಕಾರಣವಲ್ಲ. ಸಾಮಾನ್ಯ ರಕ್ತದ ಸಕ್ಕರೆ ಹೊಂದಿರುವ ಜನರು ಸಿಹಿ ತಿನ್ನಬಹುದು. ಆದರೆ ಹಿತಮಿತವಾಗಿಯೇ ತಿನ್ನಬೇಕು.
ಹಾಗಾದರೆ ಮಧುಮೇಹಕ್ಕೆ ನಿಜವಾದ ಕಾರಣವೇನು?
ಮಧುಮೇಹ ಇನ್ಸುಲಿನ್ ನ ಕೊರತೆ ಅಥವಾ ಇನ್ಸುಲಿನ್ ಪ್ರತಿರೋಧದಿಂದ ಉಂಟಾಗುತ್ತದೆ ಎಂದು ಈಗ ಅನೇಕ ಜನರಿಗೆ ತಿಳಿದಿದೆ. ಈ ಇನ್ಸುಲಿನ್ ಕೊರತೆ ಅಥವಾ ಪ್ರತಿರೋಧ ಸಂಭವಿಸಲು ಅನೇಕ ಅಂಶಗಳು ಪೂರಕವಾಗಿರುತ್ತವೆ. ಆಹಾರದ ಗುಣಮಟ್ಟ, ಅನಿಯಮಿತತೆ, ಮಾನಸಿಕ ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಪರಿಸರ ಮಾಲಿನ್ಯ ಅಂದರೆ ನಾವು ಎಷ್ಟು ರಾಸಾಯನಿಕಗಳಿಗೆ ಒಗ್ಗಿಕೊಂಡಿದ್ದೇವೆ, ನಿಸರ್ಗದಿಂದ ನಾವು ಎಷ್ಟು ದೂರವಾಗಿದ್ದೇವೆ, ಅನಿಯಮಿತ ನಿದ್ರೆ ಅಥವಾ ನಿದ್ರಾನಾಂಶ, ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಪದೇಪದೇ ಸೇವಿಸುವ ಇಂಗ್ಲಿಷ್ ಔಷಧಿಗಳು, ಇತ್ಯಾದಿ ಅನೇಕ ಅಂಶಗಳು ಯಾವುದೇ ಕಾಯಿಲೆ ಸಂಭವಿಸಲು ಕಾರಣವಾಗುತ್ತವೆ.
ಮೊದಲನೇಯದಾಗಿ ನಿದ್ದೆ- ಸಾಕಷ್ಟು ನಿದ್ದೆ ಮಾಡದವರಲ್ಲಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ನಿದ್ರೆಯ ಕೊರತೆ ಇರುವುದು ಸಹಜ, ಆದರೆ ಸಮಯಕ್ಕೆ ಸರಿಯಾಗಿ ಅಥವಾ ಗಾಢವಾದ ನಿದ್ದೆ ಮಾಡದಿದ್ದರೆ ಅಂತಹವರು ಜಾಗ್ರತೆ ವಹಿಸಬೇಕು. ಮಧುಮೇಹದಿಂದ ಬಳಲುವ ಸಾಧ್ಯತೆಯಿದೆ.
ಅಂದಹಾಗೆ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟರೆ ಮಧುಮೇಹದ ಸಮಸ್ಯೆಯನ್ನು ದೂರವಿಡಬಹುದು. ಒಬ್ಬ ವ್ಯಕ್ತಿಯು ನಿರಂತರ ಒತ್ತಡದಲ್ಲಿದ್ದರೆ ಆಗ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.
ದಿನವಿಡೀ ಕಛೇರಿಯ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರು ಮಧುಮೇಹದ ಅಪಾಯವನ್ನು 80% ವರೆಗೆ ಹೆಚ್ಚಿಸುತ್ತಾರೆ. ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು ಕಡ್ಡಾಯ. ತಮ್ಮ ದಿನಚರಿಯಲ್ಲಿ ವ್ಯಾಯಾಮದ ಕೊರತೆ ಇರುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಮಗ್ರ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಆಧುನಿಕ ಕಾಲದ ಅನಿವಾರ್ಯತೆಯಾಗಿದೆ.












