(ನ್ಯೂಸ್ ಕಡಬ) newskadaba.com ಸವಣೂರು, ಎ.7. ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿವಿದ ಕ್ಷೇತ್ರಗಳ ಮಾಹಿತಿ ಅತ್ಯಗತ್ಯ .ಈ ನಿಟ್ಟಿನಲ್ಲಿ ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ಯುವಸಪ್ತಾಹದಲ್ಲಿ ಮಾಹಿತಿ ಮೇಳವನ್ನು ಜೋಡಿಸಿರುವುದು ಶ್ಲಾಘನೀಯ ಎಂದು ವಿಜಯ ಬ್ಯಾಂಕಿನ ನಿವೃತ ಅಧಿಕಾರಿ ಪಿ.ಡಿ.ಕೃಷ್ಣ ಕುಮಾರ್ ರೈ ಹೇಳಿದರು.
ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಯುವ ಸಪ್ತಾಹದ 3ನೇ ದಿನದ ಕಾರ್ಯಕ್ರಮ ಕಾರು ಮತ್ತು ದ್ವಿಚಕ್ರ ವಾಹನಗಳ ಬುಕ್ಕಿಂಗ್ ಸಾಲ ಸೌಲಭ್ಯ ಹಾಗೂ ಮೊಬೈಲ್ ಸಿಮ್ ಮಾಹಿತಿ ಮೇಳ ವನ್ನು ಉದ್ಘಾಟಿಸಿ ಮಾತನಾಡಿದರು.
ಓರ್ವ ಹಿರಿಯರನ್ನು ದತ್ತು ಪಡೆಯುತ್ತೇನೆ
ಯುವ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಮಾಹಿತಿ ತಿಳಿದುಕೊಂಡು ಎ.8ರಂದು ಕನ್ಯಾನ ಭಾರತಿ ಸೇವಾ ಸೇವಾಶ್ರಮದಲ್ಲಿ ನಡೆಯುವ ಹಿರಿಯರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜನೆಯನ್ನು ಶ್ಲಾಘಿಸಿದ ಕೃಷ್ಣ ಕುಮಾರ್ ರೈ ಅವರು ಸೇವಾಶ್ರಮದ ಓರ್ವ ಹಿರಿಯರನ್ನು ದತ್ತು ಪಡೆಯುತ್ತೇನೆ. ತಂದೆ ತಾಯಿಯವರ ಮಹತ್ವವನ್ನು ಇಂದಿನ ಜನತೆ ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಜೆಸಿಐ ಸವಣೂರು ಇದರ ಪೂರ್ವಾಧ್ಯಕ್ಷ ವಸಂತ್ ಎಸ್. ವೀರಮಂಗಲ ಮಾತನಾಡಿ, ಸವಣೂರು ಯುವಕ ಮಂಡಲವು ತನ್ನ ನಿರಂತರ ಕಾರ್ಯಚಟುವಟಿಕೆಯ ಮೂಲಕ ಜೀವಂತಿಕೆಯನ್ನು ಈಗಲೂ ಉಳಿಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಕೃಷಿಕ ಶಿವರಾಮ ಗೌಡ ಮೆದು ಮಾತನಾಡಿ, ಸವಣೂರು ಯುವಕ ಮಂಡಲವು ಸಂಘಟನೆಯ ನಿಟ್ಟಿನಲ್ಲಿ ಇಡೀ ಸಮಾಜಕ್ಕೆ ಮಾದರಿಯಾಗಿ ಕಾಣುತ್ತದೆ. ಇಲ್ಲಿನ ಯುವಕ ಮಂಡಲವು ತನ್ನ ನಿರಂತರ ಕಾರ್ಯ ಚಟುವಟಿಕೆಯಿಂದ ಈಗಲೂ ಸಮಾಜದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಮಾಜಕ್ಕೆ ಹಲವು ನಾಯಕರನ್ನು ನೀಡಿದೆ ಎಂದರು.
ವೇದಿಕೆಯಲ್ಲಿ ಮಾಂಡೋವಿ ಮೋಟಾರ್ಸ್‍ನ ರೂರಲ್ ಸೇಲ್ಸ್ ಆಫಿಸರ್ ರಮೇಶ್ ರಾಮಕುಂಜ,ನವರತ್ನ ಮೊಬೈಲ್ ಅಂಗಡಿ ಮಾಧವ ಕೆನ್ನಾರು ಉಪಸ್ಥಿತರಿದ್ದರು. ದಯಾನಂದ ಮೆದು, ಸುರೇಶ್ ರೈ ಸುಡಿಮುಳ್ಳು, ರಾಕೇಶ್ ರೈ ಕೆಡೆಂಜಿ, ಗಿರಿಶಂಕರ ಸುಲಾಯ, ಸಚಿನ್ ಭಂಡಾರಿ ಅತಿಥಿಗಳನ್ನು ಗೌರವಿಸಿದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್ ಕೆ.ಎಂ. ಸ್ವಾಗತಿಸಿ, ಮಾಜಿ ಅಧ್ಯಕ್ಷ ಸುಪ್ರಿತ್ ರೈ ಖಂಡಿಗ ವಂದಿಸಿದರು. ಕೋಶಾಧಿಕಾರಿ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸಪ್ತಾಹದಲ್ಲಿ ಇಂದು ಕ್ರಿಕೆಟ್ ಪಂದ್ಯಾಟ
ಸವಣೂರು: ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಎ.7ರಂದು ಕ್ರಿಕೆಟ್ ಪಂದ್ಯಾಟ ನಡೆಯಲಿದೆ .ಸವಣೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಕರುಣಾಕರ ಪೂಜಾರಿ ಪಟ್ಟೆ ಉದ್ಘಾಟಿಸುವರು .ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ , ಪ್ರಗತಿ ಪರ ಕೃಷಿಕ ಪಿ.ಡಿ.ಗಂಗಾಧರ ರೈ ದೇವಸ್ಯ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಸವಣೂರು ಪ್ರಾ.ಕೃ.ಸ.ಸಂ.ದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸವಣೂರು ಉ.ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ. ಪಾಲ್ಗೊಳ್ಳುವರು.
ಎ.8ರಂದು ನಡೆಯುವ ಕ್ರಿಕೆಟ್ ಪಂದ್ಯಾಟ ದ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ವಹಿಸುವರು. ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬಿ.ಕೆ. ಬಹುಮಾನ ವಿತರಿಸುವರು. ಅತಿಥಿಗಳಾಗಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಪ್ರಜ್ವಲ ಕೆ.ಆರ್,ವಿನಯ ಬಿ., ಪೋಲೀಸ್ ಇಲಾಖೆಯ ಹರೀಶ್ ತೋಟದಡ್ಕ, ನ್ಯಾಯವಾದಿ ಮಹೇಶ್ ಕೆ. ಸವಣೂರು ಪಾಲ್ಗೊಳ್ಳುವರು. ಪಂದ್ಯಾಕೂಟದಲ್ಲಿ ವಿಜೇತರಾಗುವ ತಂಡಕ್ಕೆ ಪ್ರಥಮ 5555 ನಗದು,ದ್ವಿತೀಯ 3333 ಹಾಗೂ ಟ್ರೋಫಿ , ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಟ ಬಹುಮಾನ ನೀಡಲಾಗುತ್ತದೆ.