(ನ್ಯೂಸ್ ಕಡಬ) newskadaba.com , ಮೇ.16. ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್ ಏರ್ಪೋರ್ಟ್ ಸೇವೆಗಳನ್ನು ಗುರುವಾರ ತಡರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 15 ಅಂತಾರಾಷ್ಟ್ರೀಯ ವಿಮಾನಗಳು ಮತ್ತು ಕಾರ್ಗೋ ವಿಮಾನಗಳನ್ನು ಸೆಲೆಬಿ ಏವಿಯೇಷನ್ ನಿರ್ವಹಣೆ ಮಾಡುತ್ತಿತ್ತು. ಅವುಗಳನ್ನು ಗುರುವಾರ ರಾತ್ರಿಯಿಂದಲೇ ಬೇರೆ ಏರ್ ಸರ್ವೀಸಸ್ ಕಂಪನಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.
ಟರ್ಕಿಯ ಸೆಲೆಬಿ ಏವಿಯೇಷನ್ ಕಂಪನಿಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 500 ಕ್ಕೂ ಅಧಿಕ ಜನ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಇದೀಗ ಆ ಸಿಬ್ಬಂದಿಯನ್ನು ಬೇರೆ ಏಜೆನ್ಸಿಗಳಿಗೆ ವರ್ಗಾವಣೆ ಮಾಡಲಾಗಿದೆ. ಸೆಲೆಬಿ ಏವಿಯೇಷನ್ ನಿರ್ವಹಿಸುತ್ತಿದ್ದ ಕೆಲಸವನ್ನು ಬೇರೆ ಸಂಸ್ಥೆಗಳಿಗೆ ನೀಡಿರುವುದಾಗಿ ವಿಮಾನ ನಿಲ್ದಾಣ ಆಡಳಿತ ಸ್ಪಷ್ಟನೆ ನೀಡಿದೆ.