(ನ್ಯೂಸ್ ಕಡಬ) newskadaba.com , ಮೇ.14. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಮೂವರು ಉಗ್ರರ ಹತ್ಯೆ ಬೆನ್ನಲ್ಲೇ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಮೇ 13ರಂದು ‘ಆಪರೇಷನ್ ಕೆಲ್ಲರ್’ ಅಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆ ಮೂವರು ಉಗ್ರರನ್ನು ಹತ್ಯೆ ಮಾಡಿತ್ತು. ಇದಾದ ಬೆನ್ನಲ್ಲೇ ಭದ್ರತಾ ಪಡೆಗಳು ರೈಫಲ್, ಗ್ರೆನೇಡ್‌ಗಳು ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿವೆ. ಈ ಶಸ್ತ್ರಾಸ್ತ್ರಗಳು, ಸಾವನ್ನಪ್ಪಿದ್ದ ಮೂವರು ಉಗ್ರರಿಗೆ ಸೇರಿರಬಹುದು ಎಂದು ಹೇಳಲಾಗಿದೆ.
ಎನ್‌ಕೌಂಟರ್ ಆದ ಮೂವರು ಉಗ್ರರು ಎಲ್‌ಇಟಿ ಸಂಘಟನೆಗೆ ಸೇರಿದವರಾಗಿದ್ದು, ಆ ಪೈಕಿ ಇಬ್ಬರನ್ನು ಶೋಪಿಯಾನ್‌ನ ಸ್ಥಳೀಯರು ಎನ್ನಲಾಗಿದೆ. ಶಾಹಿದ್ ಕುಟ್ಟಯ್ ಮತ್ತು ಅದ್ನಾನ್ ಶಫಿ ದಾರ್ ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.