(ನ್ಯೂಸ್ ಕಡಬ) newskadaba.com , ಮೇ.14. ಹುಬ್ಬಳ್ಳಿಯ ಗುರುಸಿದ್ದೇಶ್ವರ ನಗರದಲ್ಲಿ ನಡೆದಿರುವ ಈ ಅಮಾನವೀಯ ಘಟನೆ ನಾಡಿನ ನಾಗರಿಕ ಸಮುದಾಯವನ್ನು ಬೆಚ್ಚಿ ಬೀಳಿಸಿದೆ. ಶಾಲಾ ಮಕ್ಕಳ ನಡುವೆ ನಡೆದ ಕಿರು ಜಗಳ ಕೇವಲ ಮಾತುಗಳ ಮಟ್ಟದಲ್ಲೇ ನಿಂತಿರಲಿಲ್ಲ, ಅದು ನೇರವಾಗಿ ಒಂದು ಪ್ರಾಣಹರಣದ ಘಟ್ಟಕ್ಕೆ ತಲುಪಿದ್ದು, ಸಮಾಜದಲ್ಲಿ ಮಕ್ಕಳ ಆಂತರಿಕ ಸ್ಥಿತಿಗೆ ಕಳವಳ ಮೂಡಿಸಿದೆ.

6ನೇ ತರಗತಿಯ ವಿದ್ಯಾರ್ಥಿಯೊಬ್ಬ, ಅಲ್ಪ ಸಣ್ಣ ದ್ವೇಷ ಹಾಗೂ ಹಿಂಸಾತ್ಮಕ ಮನೋಭಾವದ ಪರಿಣಾಮವಾಗಿ 8ನೇ ತರಗತಿಯ ವಿದ್ಯಾರ್ಥಿ ಚೇತನ ರಕ್ಕಸಗಿ (15) ಎಂಬವರನ್ನು ಚಾಕು ಇರಿದು ಹತ್ಯೆ ಮಾಡಿದ ಭೀಕರ ಘಟನೆಯು ನಡೆದಿದೆ. ಇಬ್ಬರೂ ಬಾಲಕರು ಕೂಡಿಕೊಂಡು ಆಟವಾಡುತ್ತಿದ್ದರು. ಏನೋ ಸಣ್ಣ ವಿಚಾರಕ್ಕೆ ಜಗಳ ಉಂಟಾಗಿದೆ. ನಂತರ ಜಗಳ ಕೊನೆಗೊಂಡಂತೆ ಇಬ್ಬರೂ ತಮ್ಮ ತಮ್ಮ ಮನೆಗಳಿಗೆ ಹೋಗಿದ್ದರು. ಆದರೆ… ಆ ಪುಟ್ಟ ಮನಸ್ಸಿನಲ್ಲಿ ಏನು ತಲೆತ್ತಿತೋ ಗೊತ್ತಿಲ್ಲ. ಮನೆಗೆ ಹೋದ 6ನೇ ತರಗತಿಯ ಹುಡುಗನು ಅಲ್ಲಿದ್ದ ಚಾಕುವನ್ನು ತೆಗೆದುಕೊಂಡು ಬಂದು, ಚೇತನನ ಮೇಲೆ ದಾಳಿಗೆ ಮುಂದಾದನು. ಸಿಕ್ಕ ಸಿಕ್ಕ ಕಡೆ ಚಾಕು ಇರಿದು ಹತ್ಯೆಗೈದನು.
ಚೇತನ ತನ್ನ ತಂದೆ-ತಾಯಿಗೆ ಏಕೈಕ ಮಗ. ತಂದೆ ಸೋಮಶೇಖರ ರಕ್ಕಸಗಿ, ಸ್ಥಳೀಯ ರೊಟ್ಟಿ ವ್ಯಾಪಾರ ನಡೆಸುತ್ತಿದ್ದರು. ಮಕ್ಕಳ ಭವಿಷ್ಯದ ಕನಸು ಹೊತ್ತಿದ್ದ ಈ ಕುಟುಂಬಕ್ಕೆ ಇದೀಗ ಆಘಾತದ ಹೊಡೆತ ಬಿದ್ದಿದೆ. ಪರೀಕ್ಷೆ ಮುಗಿಸಿದ ಚೇತನ, ಇದೇ ತಿಂಗಳ ಅಂತ್ಯಕ್ಕೆ 9ನೇ ತರಗತಿಗೆ ಪ್ರವೇಶ ಪಡೆಯಬೇಕಾಗಿತ್ತು. ಇದೀಗ ಒಬ್ಬ ಮಗನನ್ನು ಕಳೆದುಕೊಂಡ ತಾಯಂದಿರ ಕಣ್ಣೀರು ತಡೆಯಲಾಗುತ್ತಿಲ್ಲ. ಕುಟುಂಬದ ಆಶಾಕಿರಣ ನಶಿಸಿರುವ ಸ್ಥಿತಿಯು ಎಲ್ಲರಿಗೂ ನೋವಿನ ಕಥೆಯಾಗಿ ಪರಿಣಮಿಸಿದೆ.