(ನ್ಯೂಸ್ ಕಡಬ) newskadaba.com, ಮೇ.09: ನವದೆಹಲಿ: ಭಾರತದಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಸಂಘಟಿತ ತಪ್ಪು ಮಾಹಿತಿ ಹರಡುವಿಕೆಯನ್ನು ಆರಂಭಿಸಿದ್ದು ಕ್ಷಿಪಣಿ, ಡ್ರೋನ್ ಸೇರಿ ವೈಮಾನಿಕ ದಾಳಿಗಳ ಕುರಿತು ನಿಖರವಾದ ಮಾಹಿತಿಗಳಿಗಾಗಿ ಭಾರತ ಸರ್ಕಾರ ಅಧಿಕೃತ ಖಾತೆಗಳನ್ನು ಮಾತ್ರ ಅವಲಂಬಿಸಿ ಎಂದು ಪಿಐಬಿ(PIB) ದೇಶದ ಜನರನ್ನು ಎಚ್ಚರಿಸಿದೆ. ಜತೆಗೆ ಪರಿಶೀಲಿಸದೇ ಯಾವುದೇ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಮತ್ತು ಅಂತಹ ನಕಲಿ ಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದೆ.

ಯಾವುದೇ ತಪ್ಪು ಮಾಹಿತಿ ಕಂಡುಬಂದರೆ, ಅದರಲ್ಲೂ ಸಶಸ್ತ್ರ ಪಡೆ ಕುರಿತಾದ ಅಥವಾ ಸದ್ಯದ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಮಾಹಿತಿ ಗಮನಕ್ಕೆ ಬಂದರೆ #PIBFactCheckಗೆ ರಿಪೋರ್ಟ್ ಮಾಡಿ. ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ,(+91 8799711259) ಇಮೇಲ್(Email: factcheck@pib.gov.in) ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ.
ಭಾರತ ಪಾಕ್ ವಿರುದ್ಧ ಪ್ರತಿ ದಾಳಿ ನಡೆಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ನಾರಾಯಣ್ ಅವರು ಉತ್ತರ ಕಮಾಂಡ್‌ನ ಸೇನಾ ಅಧಿಕಾರಿಗೆ ಮಿಲಿಟರಿ ಸನ್ನದ್ಧತೆಯ ಕುರಿತು ಗೌಪ್ಯ ಪತ್ರವನ್ನು ಕಳುಹಿಸಿದ್ದಾರೆ ಎನ್ನಲಾಗುವ ಪತ್ರವೊಂದು ಹರಿದಾಡಿತ್ತು. ಇದನ್ನು ‘ಪಿಐಬಿ’ ಫ್ಯಾಕ್ಟ್‌ಚೆಕ್ ಮಾಡಿದಾಗ ಇದೊಂದು ಸುಳ್ಳು ಸುದ್ದಿ ಎನ್ನುವುದು ತಿಳಿದುಬಂದಿದೆ. ಈ ಪತ್ರವು ಸಂಪೂರ್ಣವಾಗಿ ನಕಲಿಯಾಗಿದೆ ಎಂದು ತಿಳಿಸಿದೆ.