(ನ್ಯೂಸ್ ಕಡಬ) newskadaba.com, ಮೇ.03. ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ರೀತಿಯಲ್ಲೇ ನಗರದ ಹೊರವಲಯದಲ್ಲಿ ರೌಡಿಯೊ ಬ್ಬನನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ನಗರದ ಹೊರವಲಯದ ಹಾರೋಹಳ್ಳಿಯ ಸಿದ್ದಾಪುರ ನಿವಾಸಿ ಸಂತೋಷ್ ಅಲಿಯಾಸ್ ಕರಡಿ (32) ಕೊಲೆಯಾದ ರೌಡಿ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ.


ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ರೌಡಿ ಸಂತೋಷ್ ಜೈಲು ಸೇರಿ ಹೊರ ಬಂದಿದ್ದನು. ನಂತರ ರೌಡಿ ಚಟುವಟಿಕೆಗಳಿಂದ ದೂರವಿರಲು ನಿರ್ಧರಿಸಿ ತನ್ನ ಊರಾದ ಸಿದ್ದಾಪುರಕ್ಕೆ ಹೋಗಿ ವ್ಯವಸಾಯ ಮಾಡಿಕೊಂಡಿದ್ದನು. ಇಂದು ಬೆಳಗ್ಗೆ 11.30 ರ ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಜಮೀನಿಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಹಾರೋಹಳ್ಳಿಯ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಆತನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಬೈಕ್‌ನಿಂದ ಸಂತೋಷ್ ಕೆಳಗೆ ಬೀಳುತ್ತಿದ್ದಂತೆ ದುಷ್ಕರ್ಮಿಗಳು ಮನಬಂದಂತೆ ಮಾರಕಸಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಹಾರೋಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.