(ನ್ಯೂಸ್ ಕಡಬ) newskadaba.com ಮೇ.01: ಹೊಸದಿಲ್ಲಿ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಮಂದಿಯನ್ನು ಉಗ್ರರು ಹತ್ಯೆಗೈದ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಪಾಕಿಸ್ತಾನದಿಂದ ಬರುವ ಎಲ್ಲ ವಿಮಾನಗಳಿಗೆ ಭಾರತ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಕಳೆದ ವಾರ ಎಲ್ಲ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿತ್ತು. ಇದೀಗ ಭಾರತವು ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನದಿಂದ ನೋಂದಾಯಿಸಲ್ಪಟ್ಟ, ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ಎಲ್ಲ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಇದು ಏಪ್ರಿಲ್ 30ರಿಂದ 2025ರ ಮೇ 23ರವರೆಗೆ ಜಾರಿಯಲ್ಲಿರಲಿದೆ.

ಈ ಮೂಲಕ ಭಾರತ ಮತ್ತು ಪಾಕಿಸ್ತಾನ ಎರಡೂ ಮೇ 23ರ ರಾತ್ರಿ 11:59ರವರೆಗೆ ತಮ್ಮ ವಾಯುಪ್ರದೇಶದಲ್ಲಿ ಪರಸ್ಪರ ವಿಮಾನಯಾನ ಸಂಸ್ಥೆಗಳನ್ನು ನಿರ್ಬಂಧಿಸಿವೆ. ʼʼಪಾಕಿಸ್ತಾನ ನೋಂದಾಯಿತ ವಿಮಾನಗಳು ಮತ್ತು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದಲ್ಲಿ ಪ್ರವೇಶವಿಲ್ಲʼʼ ಎಂದು ಭಾರತ NOTAM ಹೊರಡಿಸಿದೆ.