(ನ್ಯೂಸ್ ಕಡಬ) newskadaba.com ಎ. 28: ಪಹಲ್ಗಾಮ್ ದಾಳಿ ಬಳಿಕ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕಿಸ್ತಾನಿ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ.

ದೀರ್ಘಾವಧಿ ವೀಸಾ ಹೊಂದಿರುವವರ ಗಡಿಪಾರು ಮಾಡಲು ಕೇಂದ್ರ ಸೂಚನೆ ನೀಡಿಲ್ಲ. ಹೀಗಾಗಿ ದೀರ್ಘಾವಧಿ ವೀಸಾ ಹೊಂದಿರುವ 91 ಮಂದಿ ಪಾಕ್ ಪ್ರಜೆಗಳನ್ನು ಇನ್ನೂ ಗಡಿಪಾರು ಮಾಡಲಾಗಿಲ್ಲ. ಈ 91 ಮಂದಿ ಪಾಕ್ ಪ್ರಜೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. 5 ಪಾಕಿಸ್ತಾನಿ ಪ್ರಜೆಗಳು ವೈದ್ಯಕೀಯ ವೀಸಾದಡಿ ರಾಜ್ಯದಲ್ಲಿದ್ದಾರೆ. ಇವರಿಗೆ ಏ.29ರವರೆಗೆ ಮಾತ್ರ ದೇಶದಲ್ಲಿರಲು ಕೇಂದ್ರವು ವಿನಾಯಿತಿ ನೀಡಿದ್ದು, ಗಡುವಿನೊಳಗೆ ನಿಯಮಾನುಸಾರ ಗಡಿಪಾರು ಮಾಡಲಾಗುತ್ತದೆ.
ರಾಜ್ಯದಲ್ಲಿ ಅತಿ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಭಟ್ಕಳದಲ್ಲಿ 14 ಹಾಗೂ ಕಾರವಾರದಲ್ಲಿ ಒಬ್ಬರು ಸೇರಿ ಒಟ್ಟಾರೆ 15 ಮಂದಿ ವಾಸವಾಗಿದ್ದಾರೆ. ಈ ಪೈಕಿ 12 ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಜೊತೆಗೆ ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆ ಪಾಕ್ ಪ್ರಜೆಗಳು ನೆಲೆಸಿದ್ದಾರೆ.