(ನ್ಯೂಸ್ ಕಡಬ) newskadaba.com ಎ. 28 ನವದೆಹಲಿ: ಮತ್ತೊಮ್ಮೆ ಹೇಳುತ್ತೇನೆ, ಪಹಲ್ಗಾಂ ಉಗ್ರ ದಾಳಿ ಸಂತ್ರಸ್ತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. 26 ಮಂದಿಯನ್ನು ಬಲಿ ಪಡೆದ ಭಯೋತ್ಪಾದಕರು ಮತ್ತು ದಾಳಿ ಹಿಂದಿನ ರೂವಾರಿಗಳಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಉಗ್ರರು ಮತ್ತು ಉಗ್ರರ ಪೋಷಕ ರಾಷ್ಟ್ರ ಪಾಕಿಸ್ತಾನಕ್ಕೆ ಕಠಿಣ ಶಿಕ್ಷೆ ಕಾದಿದೆ ಎಂಬ ಸ್ಪಷ್ಟ ಸಂದೇಶವನ್ನು ಮತ್ತೊಮ್ಮೆ ರವಾನಿಸಿದ್ದಾರೆ.. ಭಾನುವಾರ ಪ್ರಸಾರಗೊಂಡ ಮಾಸಿಕ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪಹಲ್ಗಾಂ ದಾಳಿ ಕುರಿತು ಪ್ರಸ್ತಾಪಿಸಿದರು.


‘ಈ ದಾಳಿಯ ಚಿತ್ರಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕೊತಕೊತ ಕುದಿಯುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ವಿಶ್ವವೇ ಭಾರತದ ಬೆನ್ನಿಗೆ ನಿಂತಿದೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸುತ್ತಿರುವಾಗ ಮತ್ತು ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವಾಗ ಪ್ರವಾಸಿ ತಾಣದ ಮೇಲಿನ ಈ ದಾಳಿಯು ಪಾಕಿಸ್ತಾನ ಬೆಂಬಲಿತ ಉಗ್ರರ ಹತಾಶೆ ಮತ್ತು ಹೇಡಿತನವನ್ನು ತೋರಿಸುತ್ತದೆ ಎಂದು ಟೀಕಿಸಿದರು.