ಉಪ್ಪಿನಂಗಡಿ ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಅಡಿಕೆ ಕಳ್ಳರು ಅಂದರ್ ► ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಅಡಿಕೆ ವಶ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.31. ಕೆಲ ದಿನಗಳ ಹಿಂದೆ ನಡೆದ ಅಡಿಕೆ ಕಳವು ಪ್ರಕರಣವೊಂದನ್ನು ವಾರದೊಳಗೆ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸುವ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ನೆಲ್ಯಾಡಿ ಬಳಿಯ ಕುಂಡಡ್ಕ ನಿವಾಸಿ ಸರ್ಫ್‌ರಾಜ್ ಯಾನೆ ಹುಸೈನ್ ಸರ್ಫ್‌ರಾಜ್(30) ಎಂದು ಗುರುತಿಸಲಾಗಿದೆ. ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಸರ್ಫ್‌ರಾಜ್‌ನ ನೆರೆಮನೆಯವನಾದ ಅಶ್ಫಾಕ್ ಎಂಬಾತ ಪೊಲೀಸರ ಕಾರ್ಯಾಚರಣೆ ವೇಳೆ ಓಡಿ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ನೆಲ್ಯಾಡಿಯಲ್ಲಿರುವ ಎಚ್.ಎನ್. ಸುಪಾರಿ ಟ್ರೇಡರ್ಸ್ ನಿಂದ ಮಾರ್ಚ್ 25 ರಂದು ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಅಡಿಕೆಯನ್ನು ಕಳ್ಳತನ ನಡೆಸಿದ್ದರು. ಕಳವು ನಡೆದು ವಾರದೊಳಗೆ ಪ್ರಕರಣವನ್ನು ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವೀಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ಕುಮಾರ್, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಎಂ. ಗೋಪಾಲ ನಾಯ್ಕ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಹರೀಶ್ಚಂದ್ರ, ಪ್ರವೀಣ್ ರೈ, ಜಗದೀಶ್, ಇರ್ಷಾದ್, ಶ್ರೀಧರ್, ಚಾಲಕ ನಾರಾಯಣ ಗೌಡ ಮತ್ತು ನೆಲ್ಯಾಡಿ ಹೊರಠಾಣಾ ಎಎಸ್‌ಐ ಚೆನ್ನಪ್ಪ ಗೌಡ ಮತ್ತು ಸಿಬ್ಬಂದಿ ಶೇಖರ ಗೌಡ ಹಾಗೂ ದ.ಕ. ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ಭಾಗವಹಿಸಿದ್ದರು. ಈ ಪ್ರಕರಣವನ್ನು ಶೀಘ್ರವಾಗಿ ಬೇಧಿಸಿದ ತಂಡಕ್ಕೆ ಇಲಾಖಾ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಂದೆರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಉಪ್ಪಿನಂಗಡಿ ಪೊಲೀಸರು ಹಿನ್ನಡೆ ಅನುಭವಿಸಿದ್ದು ಬಿಟ್ಟರೆ, ಅತ್ಯಂತ ಕ್ಲಿಷ್ಟಕರ ಸೇರಿದಂತೆ ಉಳಿದೆಲ್ಲಾ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಿ ಅವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದ ಕೀರ್ತಿ ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕ ನಂದಕುಮಾರ್ ಮತ್ತವರ ತಂಡಕ್ಕೆ ಸಲ್ಲುತ್ತದೆ.

error: Content is protected !!

Join the Group

Join WhatsApp Group