(ನ್ಯೂಸ್ ಕಡಬ) newskadaba.com ಮಾ. 18 : ನವದೆಹಲಿ: ತುಂಬಾ ಗಂಭೀರವಲ್ಲದ ಪ್ರಕರಣಗಳಲ್ಲಿ ತನಿಖೆಗಳು ಈಗಾಗಲೇ ಪೂರ್ಣಗೊಂಡಿದ್ದರೂ ಕೂಡ ವಿಚಾರಣಾ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ಪ್ರಜಾಪ್ರಭುತ್ವ ರಾಷ್ಟ್ರವು ಪೊಲೀಸ್ ರಾಜ್ಯದಂತೆ ಕಾರ್ಯನಿರ್ವಹಿಸಬಾರದು. ಪೊಲೀಸ್ ರಾಜ್ಯದಲ್ಲಿ ಕಾನೂನು ಜಾರಿ ಸಂಸ್ಥೆಗಳು ಅವಶ್ಯಕತೆಯೇ ಇಲ್ಲದೆ ವ್ಯಕ್ತಿಗಳನ್ನು ಬಂಧಿಸಲು ಅನಿಯಂತ್ರಿತ ಅಧಿಕಾರವನ್ನು ಬಳಸುತ್ತವೆ ಎಂದಿದೆ.
ಎರಡು ದಶಕಗಳ ಹಿಂದೆ, ಸಣ್ಣ ಪ್ರಕರಣಗಳ ಜಾಮೀನು ಅರ್ಜಿಗಳು ಅತ್ಯಂತ ವಿರಳವಾಗಿ ಹೈಕೋರ್ಟ್ ಅಥವಾ ಉನ್ನತ ನ್ಯಾಯಾಲಯಕ್ಕೆ ಬರುತ್ತಿದ್ದವು. ಅಂತಹ ವಿಷಯಗಳನ್ನು ಸಾಮಾನ್ಯವಾಗಿ ಕೆಳ ನ್ಯಾಯಾಲಯದಲ್ಲೇ ಬಗಹರಿಸಲಾಗುತ್ತಿತ್ತು. ಆದರೆ, ಈಗ ಸಣ್ಣ ಪುಟ್ಟ ಪ್ರಕರಣಗಳ ಜಾಮೀನು ಅರ್ಜಿಗಳು ಸರ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬರುತ್ತಿವೆ.
‘ವಿಚಾರಣಾ ನ್ಯಾಯಾಲಯದ ಮಟ್ಟದಲ್ಲಿಯೇ ವಿಲೇವಾರಿ ಮಾಡಬೇಕಾದ ಪ್ರಕರಣಗಳಲ್ಲಿನ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸುವಂತಾಗಿರುವುದು ಆಘಾತಕಾರಿ. ಇದು ಕಾನೂನು ವ್ಯವಸ್ಥೆಗೆ ಅನಗತ್ಯವಾಗಿ ಹೊರೆಯಾಗುತ್ತಿದೆ’ ಎಂದು ನ್ಯಾಯಮೂರ್ತಿ ಓಕಾ ಜಾಮೀನು ಅರ್ಜಿಯ ವಿಚಾರಣೆ ನಡೆಸುವಾಗ ಹೇಳಿದರು.