(ನ್ಯೂಸ್ ಕಡಬ) newskadaba.com ಮಾ. 15 : ಮಂಗಳೂರು: ತುಳು- ಕನ್ನಡ ವಿದ್ವಾಂಸ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದ ಡಾ.ವಾಮನ ನಂದಾವರ (81) ಶನಿವಾರ ನಿಧನರಾದರು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯ ಪೀಡಿತರಾಗಿದ್ದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು.


ಹೆಸರಾಂತ ಜಾನಪದ ವಿದ್ವಾಂಸರಾಗಿದ್ದ ಡಾ. ವಾಮನ ಅವರು ಹೇಮಾಂಶು ಪ್ರಕಾಶನದ ಮೂಲಕ ಅನೇಕ ಬರಹಗಾರರನ್ನು, ಕಲಾವಿದರನ್ನು ರೂಪಿಸಿದ್ದಲ್ಲದೇ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಬಾಬು ಬಾಳೆಪುಣಿ- ಪೂವಮ್ಮರವರ ಮಗನಾಗಿ 1944ರ ನ.15ರಂದು ಅವರು ಜನಿಸಿದರು. ಬಂಟ್ವಾಳ ತಾಲೂಕಿನ ಮುದುಂಗಾರು ಕಟ್ಟೆ ಸರಕಾರಿ ಎಲಿಮೆಂಟರಿ ಶಾಲೆ, ಪಾಣೆಮಂಗಳೂರಿನ ಎಸ್‌ವಿಎಸ್ ಹೈಯರ್ ಎಲಿಮೆಂಟರಿ ಶಾಲೆ, ಕುರ್ನಾಡಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಕುರ್ನಾಡಿನ ಬೋರ್ಡ್ ಹೈಸ್ಕೂಲು, ಕೋಟೆಕಾರಿನ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸ ಮಾಡಿದ ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಬಿಎಸ್ಸಿ ಪದವಿ ಪಡೆದರು. ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿಎಡ್ ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂಎ (ಕನ್ನಡ), ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಡ್ ಪದವಿ ಪಡೆದಿದ್ದರು.