(ನ್ಯೂಸ್ ಕಡಬ) newskadaba.com ಮಾ. 11 ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಪಾಠಕ್ಕೆ ಅವಕಾಶ ಮಾಡಿಕೊಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಭಾರತಿ ಶೆಟ್ಟಿ ಅವರು, ಹದಿಹರೆಯದ ಮಕ್ಕಳ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. 14 ರಿಂದ 17ನೇ ವಯಸ್ಸಿನ ಮಕ್ಕಳ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಈ ವಯಸ್ಸಿನ ಮಕ್ಕಳ ಮೇಲೆ ಸೂಕ್ಷ್ಮ ನಿಗಾ ಇರಿಸಬೇಕು. ಶಾಲೆಯಲ್ಲಿ ಪಾಠದ ಒತ್ತಡ, ಮನೆಯಲ್ಲಿ ಮೊಬೈಲ್‌ನಲ್ಲಿ ಆಟ ಎಂಬಂತಾಗಿ ಹದಿಹರೆಯದ ಮಕ್ಕಳು ದೈಹಿಕ ಮತ್ತು ಬೌದ್ಧಿಕವಾಗಿ ದುರ್ಬಲರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಅನೇಕ ಮಕ್ಕಳ ದಾರಿ ತಪ್ಪುತ್ತಿದ್ದಾರೆ ಎಂದುು ಹೇಳಿದರು.
ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಬಾಂಬೆ ರೆಡ್ ಲೈಟ್ ಏರಿಯಾದಲ್ಲಿನ ಶೇ.99 ರಷ್ಟು ಮಹಿಳೆಯರು ಅಪ್ರಾಪ್ತ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ ಹೋದವರಾಗಿದ್ದಾರೆ. ಇಂದಿನ ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣ, ನೈತಿಕ ಶಿಕ್ಷಣ ಸಿಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 33,000 ಕ್ಕೂ ಹೆಚ್ಚು ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳು ವರದಿಯಾಗಿವೆ. ಇವು ನೋಂದಾಯಿತ ಪ್ರಕರಣಗಳಾಗಿದ್ದು, ನೋಂದಾಯಿಸದ ಪ್ರಕರಣಗಳನ್ನು ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.