(ನ್ಯೂಸ್ ಕಡಬ) newskadaba.com ಮಾ. 07 ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್ನಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸಲಾಗುತ್ತಿದೆ. ಮಾಜಿ ಪ್ರಧಾನಿ, ದಿವಂಗತ ಡಾ| ಮನಮೋಹನ್ ಸಿಂಗ್ ಅವರ ಹೆಸರನ್ನು ಬೆಂಗಳೂರು ವಿವಿಗೆ ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ತಿಳಿಸಿದ್ದಾರೆ.
ಎರಡು ಅವಧಿಗೆ ಒಟ್ಟು ಹತ್ತು ವರ್ಷ ಕಾಲ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ 2024ರ ಡಿಸೆಂಬರ್ ತಿಂಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ. ಭಾರತದ ಆಧುನಿಕ ಆರ್ಥಿಕತೆಯ ರೂವಾರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವ ಮನಮೋಹನ್ ಸಿಂಗ್ ಅವರ ಗೌರವ ಸೂಚಕವಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.
1991ರಲ್ಲಿ ಭಾರತದಲ್ಲಿ ಉದಾರೀಕರಣ ಆರ್ಥಿಕ ನೀತಿ ಜಾರಿಗೆ ತರಲಾಯಿತು. ಆಗ ಜಾಗತೀಕರಣಕ್ಕೆ ಭಾರತ ಇಟ್ಟ ಮೊದಲ ಹೆಜ್ಜೆಯಾಗಿತ್ತು. ಅಂದು ಪ್ರಧಾನಿಯಾಗಿದ್ದವರು ಪಿ.ವಿ. ನರಸಿಂಹರಾವ್. ಆ ಸರ್ಕಾರದಲ್ಲಿ ಡಾ. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರು. ಈ ಉದಾರೀಕರಣ ನೀತಿಯ ರೂವಾರಿ ಮನಮೋಹನ್ ಸಿಂಗ್ ಅವರೇ ಆಗಿದ್ದರು. 2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯೂ ಆಗಿದ್ದರು.