(ನ್ಯೂಸ್ ಕಡಬ) newskadaba.com ಮಾ. 06 ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಸಂಜೆ ಸಂಭವಿಸಿದ ಆಹಾರ ವಿಷದ (ಫುಡ್ ಪಾಯಿಸನ್) ಘಟನೆಯಲ್ಲಿ ೪೫ ವಿಚಾರಣಾಧೀನ ಕೈದಿಗಳು ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸಂಜೆ ೪:೩೦ರ ಸುಮಾರಿಗೆ ಕೆಲವು ಕೈದಿಗಳು ವಾಂತಿ ಮತ್ತು ಭೇದಿಯಿಂದ ಬಳಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅಸ್ವಸ್ಥಗೊಂಡ ಕೈದಿಗಳನ್ನು ಕಾರಾಗೃಹದ ಆಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನಗಳಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ದಾಖಲಾದ ೪೫ ಕೈದಿಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಕೈದಿಗಳು ಮಧ್ಯಾಹ್ನದ ಊಟದಲ್ಲಿ ಅವಲಕ್ಕಿ ಮತ್ತು ಅನ್ನ-ಸಾರು ಸೇವಿಸಿದ್ದರು. ಕಾರಾಗೃಹದಲ್ಲಿ ಸುಮಾರು ೩೫೦ ಕೈದಿಗಳಿದ್ದು, ವಿವಿಧ ಬ್ಯಾರಕ್‌ಗಳ ಕೈದಿಗಳು ಅಸ್ವಸ್ಥರಾಗಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿದ್ದು, ಜೈಲಿನಲ್ಲಿ ಕೈದಿಗಳಿಗೆ ನೀಡಲಾದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.